ಮೈಸೂರು : ನರ್ಸರಿ ಮಾಲೀಕರು, ರಿಯಲ್ ಎಸ್ಟೇಟ್ ಉದ್ಯಮಿಯೂ ಆದ ಮೈಸೂರಿನ ಹೆಚ್.ವಿ.ರಾಜೀವ್ ಎಂಬುವರು ತಮ್ಮ ಸ್ನೇಹ ಬಳಗದ ಮೂಲಕ ಕಳೆದ 8 ವರ್ಷಗಳಿಂದ ವಿವಿಧ ಬಗೆಯ 23ಕ್ಕೂ ಹೆಚ್ಚು ಜಾತಿಯ ಸಸಿಗಳನ್ನು ಬೆಳೆಸಿಕೊಂಡು ಬರುತ್ತಿದ್ದಾರೆ. ಈವರೆಗೆ 1 ಲಕ್ಷದ 30 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಉಚಿತವಾಗಿಯೂ ವಿತರಿಸಿದ್ದಾರೆ. ಹಸಿರು ಮೈಸೂರಿಗಾಗಿ ‘ಲಕ್ಷ ವೃಕ್ಷ’ ಅಭಿಯಾನ ಮಾಡುವ ಮೂಲಕ ಸಾಂಸ್ಕೃತಿಕ ನಗರಿಯನ್ನು ಸ್ವಚ್ಛನಗರಿಯಾಗಿ ಮಾಡುವ ಪಾಲಿಕೆಯ ಕೆಲಸಕ್ಕೂ ಸಹ ತಮ್ಮದೇ ಆದ ಕೊಡುಗೆ ನೀಡಿದ್ದು ಇಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ ಮತ್ತು ಜಾಗತಿಕ ತಾಪಮಾನ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ ಎನ್ನಲಾಗಿದೆ.

ಇದರ ಕುರಿತು ರಾಜೀವ್ ಅವರು ಪರಿಸರದ ಬಗ್ಗೆ ಕಾಳಜಿ ವಹಿಸಿಕೊಂಡಿರುವುದು ಗಮನಾರ್ಹ. ವಿಶ್ವ ಪರಿಸರ ದಿನವಾದ ಇಂದು ಇವರ ಈ ಸಾಧನೆ ಮೆಚ್ಚಲೇಬೇಕು. ತಮ್ಮದೇಯಾದ ಸ್ನೇಹ ಬಳಗ ಕಟ್ಟಿಕೊಂಡಿರುವ ಹೆಚ್.ವಿ.ರಾಜೀವ್, ಮೈಸೂರು ಭಾಗದಲ್ಲಿ ಪ್ರತಿವರ್ಷ ಇಂತಿಷ್ಟು ಸಸಿಗಳನ್ನು ಉಚಿತವಾಗಿ ನೀಡುವ ಮೂಲಕ ಪರಿಸರ ರಕ್ಷಣೆಗೆ ಪಣ ತೊಟ್ಟಿದ್ದಾರೆ. ನಗರದ ಹೊರವಲಯದಲ್ಲಿ ಏರ್ಪೋರ್ಟ್ ರಸ್ತೆಗೆ ಹೋಗುವ ಮಾರ್ಗದಲ್ಲಿ ತಮ್ಮದೇ ಆದ ಬೃಹತ್ ನರ್ಸರಿ ಫಾರಂ ಕೂಡ ಹೊಂದಿದ್ದಾರೆ. ಇಲ್ಲಿ ನಿತ್ಯವೂ 10ಕ್ಕೂ ಹೆಚ್ಚು ಕೆಲಸಗಾರರು ಸಸಿಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿರುತ್ತಾರೆ. ಇವರು ಕಳೆದ 8 ವರ್ಷಗಳಿಂದ ವಿವಿಧ 23ಕ್ಕೂ ಹೆಚ್ಚು ಜಾತಿಯ ಸಸಿಗಳನ್ನು ಬೆಳೆಸಿ ಪ್ರತಿವರ್ಷ 15 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಮೈಸೂರು ನಗರ, ಹೊರಭಾಗದ ರಿಂಗ್ ರಸ್ತೆಗಳಲ್ಲಿ ನೆಡುವ ಮೂಲಕ ಹಸಿರು ಮೈಸೂರುಗಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮೈಸೂರಿನ ವಿವಿಧ ಸಂಘ ಸಂಸ್ಥೆಗಳು, ಪರಿಸರ ಬಳಗ, ಮಠ – ಮಾನ್ಯಗಳು ಹಾಗೂ ಮೈಸೂರಿನ ಮಹಾನಗರ ಪಾಲಿಕೆ ಸೇರಿದಂತೆ ಇತರರು ಇವರಿಂದ ಉಚಿತವಾಗಿ ಸಸಿಗಳನ್ನು ಪಡೆದು ಫೋಷಣೆ ಮಾಡಿಕೊಂಡು ಬರುತ್ತಿದ್ದಾರೆ.

ಆದರಿಂದ ಮೈಸೂರಿನ ರಾಜೀವ್ ಸ್ನೇಹ ಬಳಗದ ಮೂಲಕ ಪ್ರತಿವರ್ಷ ಅಂದಾಜು 40 ಲಕ್ಷಕ್ಕೂ ಹೆಚ್ಚಿನ ಹಣ ಖರ್ಚು ಮಾಡಿ ಈ ಸಸಿಗಳನ್ನು ಬೆಳೆಸಿದ್ದಲ್ಲದೇ ಅವುಗಳನ್ನು ಬೆಳೆಸುವವರಿಗೂ ಉಚಿತವಾಗಿ ಹಂಚುತ್ತಿದ್ದಾರೆ. ಹಾಗೂ ಕಳೆದ 8 ವರ್ಷಗಳಿಂದ ಪಾಲಿಕೆಗೆ ಉಚಿತವಾಗಿ ಸಸಿಗಳನ್ನು ಕೊಡುತ್ತಿರುವ ರಾಜೀವ್ ಅವರನ್ನು ಪಾಲಿಕೆಯು ಅಭಿನಂದನೆ ಸಲ್ಲಿಸಿ ಪತ್ರ ನೀಡಿದೆ. ರಾಜ್ಯದ ಹಲವು ಸಂಘ – ಸಂಸ್ಥೆಗಳು ಕೂಡ ಇವರನ್ನು ಸನ್ಮಾನಿಸಿ ಗೌರವಿಸಿವೆ ಎಂದು ತಿಳಿದುಬಂದಿದೆ.















