ಮನೆ ಸ್ಥಳೀಯ ಮೂರು ದಿನಗಳ ಕಾಲ ನಗರದಲ್ಲಿ ಮೈಸೂರು ಫೆಸ್ಟ್ – 2023 ಆಯೋಜನೆ: ಡಾ. ಹೆಚ್ ಸಿ...

ಮೂರು ದಿನಗಳ ಕಾಲ ನಗರದಲ್ಲಿ ಮೈಸೂರು ಫೆಸ್ಟ್ – 2023 ಆಯೋಜನೆ: ಡಾ. ಹೆಚ್ ಸಿ ಮಹದೇವಪ್ಪ

0

ಮೈಸೂರು: 2024 ರ ಜನವರಿ 26, 27 ಹಾಗೂ 28 ರಂದು ನಗರದ ಮೈಸೂರುವಿಶ್ವವಿದ್ಯಾನಿಲಯದ ಬಯಲು ರಂಗ ಮಂದಿರದಲ್ಲಿ ಮೈಸೂರು ಫೆಸ್ಟ್ – 2023 ಅನ್ನು ಆಯೋಜನೆ ಮಾಡಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಎಚ್ ಸಿ ಮಹದೇವಪ್ಪನವರು ತಿಳಿಸಿದರು.

ಇಂದು ನಗರದ ಜದರ್ಶಿನಿ ಅತಿಥಿಗೃಹದಲ್ಲಿ ಹಮ್ಮಿಕೊಂಡಿದ್ದ ಮೈಸೂರು ಫೆಸ್ಟ್ – 2023ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ವಿಶ್ವ ವಿಖ್ಯಾತ ಮೈಸೂರು ದಸರಾ, ಹಲವಾರು ಪ್ರೇಕ್ಷಣೀಯ ಸ್ಥಳಗಳು ಪ್ರಸಿದ್ಧ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಮೈಸೂರು ಹೆಸರುವಾಸಿಯಾಗಿದೆ. ಈ ಹಿನ್ನಲೆಯಲ್ಲಿ ಮೈಸೂರಿನ ಸಾಂಸ್ಕೃತಿಕ ಸೊಬಗು, ಪರಂಪರೆ, ಪ್ರವಾಸೋದ್ಯಮ ವಾಣಿಜ್ಯೋದ್ಯಮ ಹಾಗೂ ಮೈಸೂರಿನ ಹಿರಿಮೆಯನ್ನು ಇನ್ನಷ್ಟು ಮುಮ್ಮಡಿಗೊಳಿಸಲು ನೂತನವಾಗಿ ಅನಾವರಣಗೊಂಡ ಲೋಗೋ ವನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಸಂಸ್ಥೆಗಳು ಅನುದಾನಿತ ಸಂಸ್ಥೆಗಳು ಮತ್ತು ಇತರೆ ಖಾಸಗಿ ಕ್ಷೇತ್ರಗಳಲ್ಲಿ ಬಳಸುವುದರ ಮೂಲಕ ಜಿಲ್ಲೆಯ ಮತ್ತಷ್ಟು ಪ್ರಖ್ಯಾತಿಗೆ ಎಲ್ಲರೂ ಕೈಜೋಡಿಸಿ ಎಂದರು.

ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಮಾತನಾಡಿ, ಮೈಸೂರು ಫಸ್ಟ್ 2023ರ ಅಂಗವಾಗಿ ಮೈಸೂರು ಪರಂಪರೆಯನ್ನು ಬಿಂಬಿಸುವ ಅತ್ಯುತ್ತಮ ಕಲಾ ತಂಡಗಳಿಂದ ನಗಾರಿ, ಡೊಳ್ಳು, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳು ಹಾಗೂ ದೊಡ್ಡವರಿಗಾಗಿ ಚಿತ್ರಸಂತೆ, ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಮೈಸೂರು ಸ್ಥಳೀಯ ಉತ್ಪನ್ನಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ದಿಷ್ಟ ಬೆಲೆಗೆ ಒಂದೇ ಸೂರಿನಡಿ ಮಾರಾಟ ಮಾಡಲು flea ಮಾರ್ಕೆಟಿಂಗ್ಆಯೋಜನೆ, ಆಹಾರಮೇಳ, ಫ್ಯಾಷನ್ ಶೋ (ವಿವಿಧ ಬ್ರಾಂಡ್ ವಸ್ತುಗಳ ಮಾರಾಟಗಾರಿಂದ ಸೇಲ್ಸ್ ಉತ್ತೇಜನಕ್ಕಾಗಿ), ಗಾಳಿಪಟ ಉತ್ಸವ, ರಾಕ್ ಬ್ಯಾಂಡ್ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಹಾಗೂ ವೀಕ್ಷಕರಿಗೆ ಸರಿಯಾದ ವಾಹನ ನಿಲುಗಡೆ ವ್ಯವಸ್ಥೆ, ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ 24 ಗಂಟೆಗಳು ಸ್ವಚ್ಛತೆ ಕಾಪಾಡುವ ಕೆಲಸ ಆಗಬೇಕು. ಪ್ರವಾಸಿಗರಿಗೆ ಮನೋರಂಜನೆ ನೀಡುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಈ ವೇಳೆಯಲ್ಲಿ ಪ್ರವಾಸೋದ್ಯಮ ಇಲಾಖೆಯ  ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ಎಂ ಕೆ ಸವಿತಾ ಅವರು ಮಾತನಾಡಿ, ಬ್ರಾಂಡ್ ಮೈಸೂರು -2023 ಸ್ಪರ್ಧೆಯಲ್ಲಿ ಬಿಡುಗಡೆ ಮಾಡಿರುವ ಲೋಗೋ, ಮ್ಯಾಸ್ಕಾಟ್, ಸ್ಮರಣಿಕೆಗಳನ್ನು ಬಳಸುವುದರ ಮೂಲಕ ಮೈಸೂರು ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಬ್ಯಾರಿಗೇಟ್, ಸಿಗ್ನಲ್ ಬೋರ್ಡ್ ಪೊಲೀಸ್ ಚೌಕಿಗಳಲ್ಲಿ ನಮ್ಮ ಪರಂಪರೆ ನಿಮ್ಮ ತಾಣ ಎಂಬ ಅಡಿ ಬರಹವನ್ನು ಒಳಗೊಂಡ ಮೈಸೂರಿನ ನೂತನ ಲೋಗೋ ಅಳವಡಿಕೆಗೆ ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.

ಸಭೆಯಲ್ಲಿ  ಪೋಲಿಸ್ ವರಿಷ್ಠಾಧಿಕಾರಿಗಳಾದ ಸೀಮಾಲಾಟ್ಕರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ದಿನೇಶ್ ಕುಮಾರ್, ಪ್ರಾಚ್ಯ ವಸ್ತು ಸಂಗ್ರಹಾಲಯದ ಆಯುಕ್ತರಾದ ದೇವರಾಜು, ಡಿಸಿಪಿ ಮುತ್ತುರಾಜ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಕೆ ಹರೀಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಹೋಟೆಲ್ ಓನರ್ ಅಸೋಸಿಯೇಷನ್ ನ ಅಧ್ಯಕ್ಷರಾದ ನಾರಾಯಣ್ ಗೌಡ, ಮೈಸೂರು ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಕೆ ಬಿ ಲಿಂಗರಾಜು, ಮೈಸೂರು ಸಂಘ ಸಂಸ್ಥೆಗಳ ಅಧ್ಯಕ್ಷರಾದ ಪ್ರಶಾಂತ್ ಬಿ ಎಸ್, ಮೈಸೂರು ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷರಾದ ಆನಂದ್, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಜೆ.ಪಿ ಅರಸ್, ಜವಾಜಿ ಹೋಟೆಲ್ ಗ್ರೂಪ್ಸನ ಜೆ ಬಾಪೂಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.