ಮೈಸೂರು: ಟೈಲರಿಂಗ್ ವೃತ್ತಿ ಮಾಡುತ್ತಿರುವ ಗೃಹಿಣಿ ಶ್ರೀಮತಿ ಪುಷ್ಪ (43) ಅವರನ್ನು ಕುಂಬಾರ ಕೊಪ್ಪಲು 1ನೇ ಮುಖ್ಯರಸ್ತೆಯಲ್ಲಿ ಅವರು ವಾಸವಿದ್ದ ಮನೆಯಲ್ಲಿ ಹತ್ಯೆ ಮಾಡಲಾಗಿದೆ.
ಕುಂಬಾರಕೊಪ್ಪಲು ನಿವಾಸಿ ಪುಷ್ಪ ಅವರು ಕೌಟುಂಬಿಕ ಕಲಹದಿಂದಾಗಿ ಕಳೆದ ಒಂದು ವರ್ಷದಿಂದ ಪತಿಕುಮಾರ್ ಅವರಿಂದ ದೂರವಿದ್ದು, ಟೈಲರಿಂಗ್ ವೃತ್ತಿ ಮಾಡುತ್ತಿದ್ದರು. ಅ. 11 ರಂದು ಮಧ್ಯಾಹ್ನ 12:00 ಗಂಟೆ ಸಮಯದಲ್ಲಿ ತಮ್ಮ ಪುತ್ರಿ ಕೆ.ಆಶಾ ಅವರ ಮೊಬೈಲ್ ಗೆ ಕರೆ ಮಾಡಿದ ನಂತರ ಪುಷ್ಪ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಹಲವಾರು ಬಾರಿ ಕರೆ ಮಾಡಿದರೂ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಸಂಶಯಗೊಂಡು ಪುಷ್ಪ ಅವರ ಪುತ್ರಿಯರಾದ ಆಶಾ ಮತ್ತು ಉಷಾ ಅವರುಗಳು ಅ. 15ರಂದು ಬೆಳಗ್ಗೆ ಪುಷ್ಪ ವಾಸವಿದ್ದ ಮನೆಗೆ ತೆರಳಿ ನೋಡಿದಾಗ ಮನೆ ಲಾಕ್ ಆಗಿತ್ತು. ಆದರೆ ಮನೆಯೊಳಗಿಂದ ದುರ್ವಾಸನೆ ಬೀರುತ್ತಿದ್ದ ಕಾರಣ ಅಕ್ಕಪಕ್ಕದ ಮನೆಯವರನ್ನು ವಿಚಾರಿಸಲಾಗಿದೆ. ಅ.12 ರಂದು ರಾತ್ರಿ ಮಂಜೇಶ್ ಎಂಬಾತ ಪುಷ್ಪಳ ಮನೆಗೆ ಬಂದಿದ್ದ, ಆ ಸಂದರ್ಭದಲ್ಲಿ ಮನೆ ಒಳಗೆ ಗಲಾಟೆ ನಡೆಯುತ್ತಿತ್ತು ಎಂದು ತಿಳಿಸಿದ್ದಾರೆ.
ನಂತರ ಮೇಟಗಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರ ಸಮ್ಮುಖದಲ್ಲಿ ಮನೆಯ ಬೀಗ ಒಡೆದು ಒಳ ಪ್ರವೇಶಿಸಿ ನೋಡಿದಾಗ, ಪುಷ್ಪ ಅರೆ ನಗ್ನಳಾಗಿ ಬಿದ್ದಿದ್ದು, ದೇಹದ ಮೇಲೆ ಬೆಡ್ ಶೀಟ್ ಹೊದಿಸಲಾಗಿತ್ತು. ಮಂಜೇಶ್ ಎಂಬಾತನೊಂದಿಗೆ ತಾಯಿ ಪುಷ್ಪಗಳಿಗೆ ಸಂಬಂಧವಿತ್ತು. ಎಂದು ಆಕೆಯ ಪುತ್ರಿ ಉಷಾ ತಿಳಿಸಿದ್ದು, ಪುಷ್ಪಳನ್ನ ಮಂಜೇಶನೇ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮೇಟಗಳ್ಳಿ ಠಾಣೆ ಪೋಲಿಸರು, ತಲೆಮರೆಸಿಕೊಂಡಿರುವ ಮಂಜೇಶ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.














