ಮನೆ ಅಪರಾಧ ಮೈಸೂರು ಪೊಲೀಸರ ಕಾರ್ಯಾಚರಣೆ: ಇಬ್ಬರು ಡ್ರಗ್ ಪೆಡ್ಲರ್’ಗಳ ಬಂಧನ

ಮೈಸೂರು ಪೊಲೀಸರ ಕಾರ್ಯಾಚರಣೆ: ಇಬ್ಬರು ಡ್ರಗ್ ಪೆಡ್ಲರ್’ಗಳ ಬಂಧನ

0

ಮೈಸೂರು(Mysuru): ಮೈಸೂರು ಪೊಲೀಸರು  ಕಾರ್ಯಾಚರಣೆ ನಡೆಸಿ ಇಬ್ಬರು ಡ್ರಗ್ಸ್ ಪೆಡ್ಲರ್ ಗಳು ಹಾಗೂ  ಖಾಲಿ ನಿವೇಶನದಲ್ಲಿ ಗಾಂಜಾ ಬೆಳೆದಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಮೈಸೂರು ನಗರದ ಸಿಸಿಬಿ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಡಿ.23 ರಂದು ಇಲ್ಲಿನ ಕುವೆಂಪುನಗರ ಕೆ.ಬ್ಲಾಕ್ ಆದಿಚುಂಚನಗಿರಿ ರಸ್ತೆಯಲ್ಲಿ ದಾಳಿ ಮಾಡಿ  ಒಂದು ಬುಲೆಟ್ ಬೈಕ್‌ ನ್ನು ನಿಲ್ಲಿಸಿಕೊಂಡು ಅಲ್ಲಿಗೆ ಗಿರಾಕಿಗಳನ್ನು ಬರಮಾಡಿಕೊಂಡು ಡ್ರಗ್ಸ್ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಾಗೆಯೇ  ಅವರ ಬಳಿ ಇದ್ದ 31 ಗ್ರಾಂ ತೂಕದ MDMA, ECSTASY TABLETS ಮತ್ತು LSD ಪೇಪರ್, ರೂ 5000 ನಗದು ಹಣ, ಎರಡು ಮೊಬೈಲ್‌ ಫೋನ್‌ಗಳು ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಇಬ್ಬರು ಆರೋಪಿಗಳ ಪೈಕಿ 1ನೇ ಆರೋಪಿ ಮೈಸೂರಿನ ಜೆ.ಎಸ್.ಎಸ್. ಕಾನೂನು ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, 2ನೇ ಆರೋಪಿ ವಕೀಲ ವೃತ್ತಿ ಮಾಡುತ್ತಿರುವುದು ವಿಚಾರಣೆಯ ವೇಳೆ ತಿಳಿದು ಬಂದಿದೆ. ಆರೋಪಿತರು ಸದರಿ ಮಾದಕ ವಸ್ತುವನ್ನು ಎಲ್ಲಿಂದ ತೆಗೆದುಕೊಂಡು ಬರುತ್ತಿದ್ದರು ಹಾಗೂ ಮೈಸೂರಿನಲ್ಲಿ ಯಾರು ಯಾರಿಗೆ ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಗಾಂಜಾ ಬೆಳೆದಿದ್ದ ಆರೋಪಿ ಬಂಧನ

ನಗರದ ಉದಯಗಿರಿ ಪೋಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮೈಸೂರು ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಲಾಲ್ ಘಾಟ್‌ ನಲ್ಲಿರುವ ಸರ್ವೆ ನಂ 48 ರ ಖಾಲಿ ನಿವೇಶನದಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳಸುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.  

ಖಾಲಿ ನಿವೇಶನದಲ್ಲಿ ಬೆಳೆಸಿದ್ದ ರೂ 3,00,000 ಮೌಲ್ಯದ 14 ಕೆ.ಜಿ 800 ಗ್ರಾಂ ತೂಕವಿರುವ 4 ಹಸಿ ಗಾಂಜಾ ಗಿಡಗಳು ಹಾಗೂ 2 ಒಣಗಿದ ಗಾಂಜಾ ಗಿಡಗಳನ್ನು ಬೇರು ಸಮೇತ ಕಿತ್ತು ವಶಕ್ಕೆ ಪಡೆದುಕೊಳ್ಳಲಾಗಿದೆ.