ಮೈಸೂರು : ಮೈಸೂರು ನಗರದಲ್ಲಿ ಶೀಘ್ರವೇ ಮತ್ತೊಂದು ಕ್ರೀಡಾಂಗಣ ತಲೆ ಎತ್ತಲಿದೆ. ”ಮೈಸೂರಿನ ಜಯದೇವ ಆಸ್ಪತ್ರೆ ಹಿಂಭಾಗದಲ್ಲಿರುವ ಕುಂಬಾರ ಕೊಪ್ಪಲಿನ 2 ಎಕರೆ 0.25 ಗುಂಟೆ ಜಾಗದಲ್ಲಿ 4.95 ಕೋಟಿ ರೂ. ಪಾಲಿಕೆ ಅನುದಾನದಲ್ಲಿ ನಿರ್ಮಿಸುತ್ತಿರುವ ಈ ಸ್ಟೇಡಿಯಂನಲ್ಲಿ ಒಂದು ಕಬಡ್ಡಿ ಹಾಗೂ ಎರಡು ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಈ ಕುರಿತು ಈಗಾಗಲೇ ಪಾಲಿಕೆ ಬಜೆಟ್‌ನಲ್ಲಿ ಅನುಮೋದನೆ ದೊರೆತಿದೆ. ಸದ್ಯ ಡಿಪಿಆರ್ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿಯೇ ಅದಕ್ಕೆ ಮುಂಜೂರಾತಿ ದೊರೆಯಲಿದೆ. ನಂತರ ಟೆಂಡರ್ ಕರೆದು ಗುತ್ತಿಗೆದಾರರಿಗೆ ಕಾಮಗಾರಿ ಜವಾಬ್ದಾರಿ ವಹಿಸುವ ಮೂಲಕ ಮುಂದಿನ ಎರಡು ತಿಂಗಳಲ್ಲಿ ಕ್ರೀಡಾಂಗಣ ನಿರ್ಮಾಣ ಕೆಲಸ ಆರಂಭಿಸಲಾಗುವುದು. ಅವರಿಗೆ 6 ತಿಂಗಳು ಕಾಲಾವಕಾಶ ನೀಡುವುದರಿಂದ ಮುಂದಿನ 8 ತಿಂಗಳಲ್ಲಿ ನೂತನ ಸ್ಟೇಡಿಯಂ ನಿರ್ಮಾಣಗೊಳ್ಳಲಿದೆ, ಎಂದು ಪಾಲಿಕೆ ಅಧೀಕ್ಷಕ ಎಂಜಿನಿಯರ್ ಸಿ.ಎಸ್.ಮಂಜು ವಿಜಯ ಕರ್ನಾಟಕಕ್ಕೆ ತಿಳಿಸಿದರು.
ಮೈಸೂರಿನ ಹಳೆಯ ಬಡಾವಣೆಯಾಗಿರುವ ಕುಂಬಾರ ಕೊಪ್ಪಲು ಹಿಂದಿನಿಂದಲೂ ಕುಸ್ತಿ ಕ್ರೀಡೆಗೆ ಹೆಸರುವಾಸಿ. ಇಂದಿಗೂ ವಿಶೇಷ ಸಂದರ್ಭದಲ್ಲಿ ರಾಜ್ಯ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯ ಆಯೋಜಿಸಲಾಗುತ್ತದೆ. ಬಡಾವಣೆಯ ಕೆಲವೆಡೆ ಗರಡಿ ಮನೆಗಳಿವೆ. ಹೀಗೆ ರಾಜರ ಕಾಲದಿಂದಲೂ ಕ್ರೀಡಾ ಚಟುವಟಿಕೆಗಳಿಗೆ ವೇದಿಕೆಯಾಗಿರುವ ಈ ಬಡಾವಣೆಯಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣದ ಮೂಲಕ ಇನ್ನು ಮುಂದೆ ನಿರಂತರವಾಗಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಸಾಧ್ಯವಾಗಲಿದೆ.















