ಮನೆ ಸುದ್ದಿ ಜಾಲ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಸಕ್ರಿಯವಾಗಿ ಜಾರಿಗೊಳಿಸಲಾಗಿದೆ: ಪ್ರೊ.ಜಿ.ಹೇಮಂತ್ ಕುಮಾರ್

ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಸಕ್ರಿಯವಾಗಿ ಜಾರಿಗೊಳಿಸಲಾಗಿದೆ: ಪ್ರೊ.ಜಿ.ಹೇಮಂತ್ ಕುಮಾರ್

0

ಮೈಸೂರು:  ‘ರಾಷ್ಟ್ರೀಯ ಶಿಕ್ಷಣ ನೀತಿ-2020″ ಅನ್ನು ವಿಶ್ವವಿದ್ಯಾನಿಲಯದಲ್ಲಿ ಸಕ್ರಿಯವಾಗಿ – ಜಾರಿಗೊಳಿಸಲಾಗಿದೆ. ಅಲ್ಲದೆ ಕೆರಿಯರ್ ಹಬ್ ತನ್ನ ಕಾರ್ಯವೈಖರಿಯನ್ನು ಪ್ರಾರಂಭಿಸಿದ್ದು, ಇದರಿಂದ 1500 ವಿದ್ಯಾರ್ಥಿಗಳಿಗೆ ನೌಕರಿ ಸಿಗುವ ಭರವಸೆ ಇದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ‌ಕುಮಾರ್ ತಿಳಿಸಿದರು.

73ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಕ್ರಾಫರ್ಡ್ ಹಾಲ್ ಮುಂಭಾಗ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಹಲವು ತಿದ್ದುಪಡಿಗಳ ನಂತರ 1950ರ ಜನವರಿ 26ರಂದು ಪೂರ್ಣ ಪ್ರಮಾಣದಲ್ಲಿ ಸಂವಿಧಾನ ಅಂಗೀಕೃತವಾಯಿತು. ಹಾಗಾಗಿ ಸಂವಿಧಾನ – ಕಾರ್ಯೋನ್ಮುಖವಾದ ಸಂದರ್ಭವನ್ನು ನಾವು ಗಣರಾಜ್ಯ ದಿನವೆಂದು ಆಚರಿಸುತ್ತಾ ಬಂದಿದ್ದೇವೆ. ಸಂವಿಧಾನ ಶಿಲ್ಪಿ ಎಂದೇ ಖ್ಯಾತರಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರವಾದುದು. ಹಾಗಾಗಿ ಅವರಿಗೆ ನಮ್ಮ ಕೃತಜ್ಞತೆಯನ್ನು ಸಮರ್ಪಿಸಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.

ಭಾರತದ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಸಂವಿಧಾನವು ಘೋಷಿಸುತ್ತದೆ. ಈ ಗಣರಾಜ್ಯ ದಿನದಂದು, ನಾವು ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ಪ್ರಬಲ ರಾಜಕಾರಣಿಯಾಗಿರಲಿ, ಅಥವಾ ನಾಗರಿಕರಾಗಿರಲಿ, ನಮ್ಮ ಅದ್ಭುತ ಸಂವಿಧಾನವು ನಮಗೆ ನೀಡಿದ್ದು, ಈ ಮೂಲಭೂತ ತತ್ವಗಳು ಮತ್ತು ಮೌಲ್ಯಗಳನ್ನು ಎಲ್ಲರೂ ಗೌರವಿಸಬೇಕಿದೆ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ನಮ್ಮ ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಘಟಕಕ್ಕೆ ಹಾಗೂ ವಿದ್ಯಾರ್ಥಿನಿಯರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಹಾಸನದ ಎವಿಕೆ ಕಾಲೇಜಿನ ತನುಶ್ರೀ ಹಾಗೂ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸುಷ್ಮಿತಾ ಅವರು ದೆಹಲಿಯಲ್ಲಿ ನಡೆಯುತ್ತಿರುವ ಪಥಸಂಚಲನದಲ್ಲಿ ಭಾಗವಹಿಸುತ್ತಿದ್ದಾರೆ. ಇವರ ಭಾಗವಹಿಸುವಿಕೆಯಿಂದ ಮೈಸೂರು ವಿಶ್ವವಿದ್ಯಾನಿಲಯದ ಹೆಸರು ಪ್ರಜ್ವಲಿಸುತ್ತದೆ. ಎನ್ಎಸ್ಎಸ್ ಘಟನವು ಹೀಗೆ ಉತ್ತಮವಾದ ಕೆಲಸಕಾರ್ಯಗಳನ್ನು ಕೈಗೊಂಡು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶ್ರಮಿಸಲಿ ಎಂದು ಹಾರೈಸಿದರು.

ಇಂದು ನಮ್ಮ ದೇಶವು ಪ್ರಗತಿಪರದತ್ತ ಸಾಗುತ್ತಾ ಡಿಜಿಟಲೀಕರಣಗೊಂಡು ಡಿಜಿಟಲ್ ಇಂಡಿಯಾ ಆಗಿದೆ. ಹಾಗೆಯೇ ನಮ್ಮ ಮೈಸೂರು ವಿಶ್ವವಿದ್ಯಾನಿಲಯದಲ್ಲಿಯೂ ಸಹ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಡಿಜಿಟಲೀಕರಣಗೊಳಿಸುವತ್ತ ಸಾಗಿದೆ. ಯಾವುದೇ ವಿಶ್ವವಿದ್ಯಾನಿಲಯವಾಗಲಿ ಅಥವಾ ಶಿಕ್ಷಣ ಸಂಸ್ಥೆಯಾಗಲಿ ಶ್ರೇಷ್ಠತೆ ಪಡೆಯಬೇಕಾದರೆ ಅಲ್ಲಿನ ಅಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಎಲ್ಲಾ ಉದ್ಯೋಗಿಗಳು, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ. ತನ್ನ ಬೋಧಕವರ್ಗದ ಸಾಮರ್ಥ್ಯದಷ್ಟೇ ದೃಢವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆ ನಿರಂತರವಾಗಿ ಸಾಗಬೇಕಾಗುತ್ತದೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರು ಅಳವಡಿಸಿಕೊಂಡಿದ್ದಂತಹ ಮೌಲ್ಯಗಳನ್ನು ಉಳಿಸಿಕೊಂಡು, ನಮ್ಮ ಯುವ ಪೀಳಿಗೆಯು, ಈ ಪ್ರಮುಖ ಮೌಲ್ಯಗಳನ್ನು ಪಾಲಿಸಿದ್ದೇ ಆದರೆ ನಮ್ಮ ಅಭಿವೃದ್ಧಿಯ ಹಾದಿಯನ್ನು ಬೆಳಗಿಸಬಹುದಾಗಿದೆ ಎಂದರು.

ಹಿಂದಿನ ಲೇಖನಹಾವು ಬಿಟ್ಟರೆ ತಾನೇ ಅದು ಬುಸ್ ಅನ್ನುತ್ತಾ ಠುಸ್ ಅನ್ನುತ್ತಾ ಗೊತ್ತಾಗೋದು: ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯ
ಮುಂದಿನ ಲೇಖನ75 ಸರ್ಕಾರಿ ಶಾಲೆಗಳನ್ನು ‘ನೇತಾಜಿ ಅಮೃತ ಶಾಲೆ’ಗಳೆಂದು ಘೋಷಿಸಿದ ಸರ್ಕಾರ