ಮನೆ ರಾಷ್ಟ್ರೀಯ 2047ರ ವೇಳೆಗೆ ಆತ್ಮನಿರ್ಭರತೆಯ ಗುರಿ ಸಾಧಿಸಲಿರುವ ನೌಕಾಪಡೆ: ಅಡ್ಮಿರಲ್‌ ಆರ್‌.ಹರಿಕುಮಾರ್‌

2047ರ ವೇಳೆಗೆ ಆತ್ಮನಿರ್ಭರತೆಯ ಗುರಿ ಸಾಧಿಸಲಿರುವ ನೌಕಾಪಡೆ: ಅಡ್ಮಿರಲ್‌ ಆರ್‌.ಹರಿಕುಮಾರ್‌

0

ನವದೆಹಲಿ: ಕೇಂದ್ರ ಸರ್ಕಾರವು ಆತ್ಮನಿರ್ಭರ ಭಾರತದ ಕುರಿತು ನಮಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ. ನೌಕಾಪಡೆಯು 2047ರ ವೇಳೆಗೆ ಆತ್ಮನಿರ್ಭರತೆಯ ಗುರಿ ಸಾಧಿಸಲಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌.ಹರಿಕುಮಾರ್‌ ತಿಳಿಸಿದ್ದಾರೆ.

ನೌಕಾ ದಿನದ ಹಿನ್ನೆಲೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2047ರ ವೇಳೆಗೆ ಗುರಿ ಸಾಧಿಸುವುದಾಗಿ ನಾವು ಭರವಸೆ ನೀಡಿದ್ದು, ಈ ದಿಸೆಯಲ್ಲಿ ಹಿಂದಿನ ಒಂದು ವರ್ಷದಲ್ಲಿ ಹಲವು ಕೆಲಸಗಳನ್ನು ಮಾಡಿದ್ದೇವೆ. ಯುದ್ಧವಿಮಾನ ವಾಹಕ ನೌಕೆ ಐಎನ್‌’ಎಸ್‌ ವಿಕ್ರಾಂತ್‌ ಅನ್ನು ನಿರ್ಮಾಣ ಮಾಡಿರುವುದು ಮಹತ್ವದ ಹೆಜ್ಜೆಯಾಗಿದೆ ಎಂದಿದ್ದಾರೆ.

ಅಮೆರಿಕದಿಂದ ‘ಪ್ರಿಡೇಟರ್‌’ ಡ್ರೋನ್‌ ಖರೀದಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದೂ ತಿಳಿಸಿದ್ದಾರೆ.

ಒಟ್ಟು 30 ಶಸ್ತ್ರಸಜ್ಜಿತ ಎಂಕ್ಯೂ–9ಬಿ ಪ್ರಿಡೇಟರ್‌ ಡ್ರೋನ್‌ಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ₹24,426 ಕೋಟಿಗೂ ಅಧಿಕ ಮೊತ್ತ ತಗುಲಲಿದೆ. ಚೀನಾಕ್ಕೆ ಹೊಂದಿಕೊಂಡಂತಿರುವ ಗಡಿ ಹಾಗೂ ಹಿಂದೂ ಮಹಾಸಾಗರ ಪ್ರದೇಶದ ಮೇಲೆ ಕಣ್ಗಾವಲು ಇಡುವುದಕ್ಕೆ ಈ ಡ್ರೋನ್‌ಗಳು ಸಹಕಾರಿಯಾಗಿವೆ ಎಂದು ಹೇಳಿದ್ದಾರೆ.

ಎಂಕ್ಯೂ–9ಬಿ ಡ್ರೋನ್‌, ಎಂಕ್ಯೂ–9 ರೀಪರ್‌ ಡ್ರೋನ್‌ನ ರೂಪಾಂತರಿಯಾಗಿದೆ. ಕರಾವಳಿ ಪ್ರದೇಶದ ಮೇಲೆ ಕಣ್ಗಾವಲು ಇಡುವ ಉದ್ದೇಶದಿಂದ ಭಾರತವು 2020ರಲ್ಲಿ ಒಂದು ವರ್ಷದ ಅವಧಿಗೆ ಎರಡು ಎಂಕ್ಯೂ–9ಬಿ ಡ್ರೋನ್‌ಗಳನ್ನು ಪಡೆದಿತ್ತು. ಈ ಡ್ರೋನ್‌ಗಳ ಗುತ್ತಿಗೆ ಅವಧಿಯನ್ನೂ ನೌಕಾಪಡೆ ವಿಸ್ತರಿಸಿದೆ.

15 ವರ್ಷಗಳಲ್ಲಿ 200 ಹಡಗು ಹೊಂದುವ ಗುರಿ

ಮುಂಬೈ: 2037ರ ವೇಳೆಗೆ ನೌಕಾಪಡೆಯು ಒಟ್ಟು 200 ಹಡಗುಗಳು ಹಾಗೂ ಸಬ್‌ಮರಿನ್‌ಗಳನ್ನು ಹೊಂದುವ ಗುರಿ ಇದೆ ಎಂದು ವೆಸ್ಟರ್ನ್‌ ನೇವಲ್‌ ಕಮಾಂಡ್‌’ನ ಫ್ಲಾಗ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್‌ ಆಗಿರುವ ವೈಸ್‌ ಅಡ್ಮಿರಲ್‌ ಅಜೇಂದ್ರ ಬಹದ್ದೂರ್‌ ಸಿಂಗ್‌ ಹೇಳಿದ್ದಾರೆ.

ಶನಿವಾರ ಇಲ್ಲಿ ಮಾತನಾಡಿದ ಅವರು,2022–23ನೇ ಸಾಲಿನ ಸಮುದ್ರಯಾನ ಸಾಮರ್ಥ್ಯ ದೃಷ್ಟಿಕೋನ ಯೋಜನೆಯು (ಎಂಸಿಪಿಪಿ) ಈಗಿರುವ ಯಂತ್ರಗಳನ್ನು ನವೀಕರಿಸುವ ಹಾಗೂ ಹೊಸ ಹಾರ್ಡ್‌ವೇರ್‌ಗಳನ್ನು ಖರೀದಿಸುವ ಗುರಿ ಹೊಂದಿದೆ. ಸದ್ಯ ನೌಕಾಪಡೆಯು 130 ಹಡಗು ಹಾಗೂ ಸಬ್‌ಮರಿನ್‌ಗಳನ್ನು ಹೊಂದಿದೆ. ಇದನ್ನು 200ಕ್ಕೆ ಹೆಚ್ಚಿಸುವುದೂ ಎಂಸಿಪಿಪಿಯ ಗುರಿಯಾಗಿದೆ ಎಂದಿದ್ದಾರೆ.