ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಗೆ ಆಯ್ಕೆ ಯಾಗಿರುವ ಸಾಹಸಿ ರೈತ ಅಮೈ ಮಹಾಬಲ ನಾಯ್ಕರ ತೋಟಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭೇಟಿ ನೀಡಿದರು.
ಶ್ರೀಗಳವರ ದಿಢೀರ್ ಭೇಟಿಯಿಂದ ಅಚ್ಚರಿಗೊಂಡ ನಾಯ್ಕರು ಅತೀವ ಸಂತಸಪಟ್ಟು ಭಕ್ತಿ ಗೌರವದಿಂದ ಬರಮಾಡಿಕೊಂಡರು.
ನಾಯ್ಕರ ತೋಟಕ್ಕೆ ತೆರಳಿದ ಶ್ರೀಗಳು ಭಗೀರಥ ಯತ್ನದಿಂದ ಕೊರೆದ ಸುರಂಗದ ಒಳಹೊಕ್ಕು ವಿಸ್ಮಯಗೊಂಡರು . ಸುರಂಗ ಕೊರೆದು ಗಂಗೆಯನ್ನು ಪಡೆದ ಯಶೋಗಾಥೆಯನ್ನು ನಾಯ್ಕರಿಂದಲೇ ಕೇಳಿ, ತುಂಬಿರುವ ಸಮೃದ್ದ ಜಲಸೆಲೆಯನ್ನು ಕಂಡು ಸಂತಸವ್ಯಕ್ತಪಡಿಸಿದರು. ತೋಟದಲ್ಲಿ ಸಮೃದ್ಧವಾಗಿ ಬೆಳೆದು ನಿಂತು ನಾಯ್ಕರ ಸಾರ್ಥಕ ಶ್ರಮದ ಫಲಕ್ಕೆ ಸಾಕ್ಷಿ ಹೇಳುತ್ತಿರುವ ತೆಂಗು ಕಂಗು, ಬಾಳೆ ಮಾವು ಹಲಸು ಮೊದಲಾದವುಗಳನ್ನು ವೀಕ್ಷಿಸಿದ ಬಳಿಕ ಮನೆಗೆ ಮರಳಿದ ಶ್ರೀಗಳವರಿಗೆ ನಾಯ್ಕರು ಮತ್ತವರ ಮನೆ ಮಂದಿಗೌರವಾರ್ಪಣೆಗೈದರು.
ನಾಯ್ಕರ ಕೃಷಿಯ ಅವಿರತ ಸಾಧನೆಯನ್ನು ಮನಸಾರೆ ಬಣ್ಣಿಸಿದ ಶ್ರೀಗಳು ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಅತ್ಯಂತ ಅಭಿನಂದನೀಯ ಎಂದರು.
ನಾಯ್ಕರಿಗೆ ಶಾಲು, ಶ್ರೀಕೃಷ್ಣನ ವಿಗ್ರವಿರುವ ಕಾಷ್ಠ ಮಂಟಪದ ಸ್ಮರಣಿಕೆ, ನಗದು, ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಸ್ಥಳೀಯ ಜನಾರ್ದನ ಭಟ್ , ಪಂಚಾಯತ್ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.