ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್-ಯುಜಿ) ವೇಳೆ ಪ್ರಶ್ನೆಪತ್ರಿಕೆ ಸೋರಿಕೆ ವರದಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವ ವಿದ್ಯಾರ್ಥಿಗಳ ಕೌನ್ಸೆಲಿಂಗ್ ನಿಲ್ಲಿಸಲು ನಿರಾಕರಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ನ್ಯೂನತೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್ಟಿಎ)ಗೆ ನೋಟಿಸ್ ನೀಡಿದೆ. ವಿದ್ಯಾರ್ಥಿಗಳ ಗ್ರೇಸ್ ಅಂಕಗಳನ್ನು ನೀಡಲಾಗುತ್ತಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ಹಾಗೂ ನ್ಯಾಯಮೂರ್ತಿ ಎ ಅಮಾನುಲ್ಲಾ ಅವರ ಪೀಠವು ಜುಲೈ 8 ರಂದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣಗಳ ಪಟ್ಟಿ ಮಾಡಿದೆ. ಪರೀಕ್ಷೆಯ ಪಾವಿತ್ರ್ಯತೆಯನ್ನು ಪ್ರಶ್ನಿಸಲಾಗಿದೆ ಅದಕ್ಕೆ ನಮಗೆ ಉತ್ತರಗಳು ಬೇಕು ಎಂದು ಹೇಳಿದರು.
2024ನೇ ಸಾಲಿನ ನೀಟ್-ಯುಜಿ ಪರೀಕ್ಷೆಯನ್ನು ಹೊಸದಾಗಿ ನಡೆಸಬೇಕು ಎಂದು ಕೋರಿ ಹಲವು ಅಭ್ಯರ್ಥಿಗಳು ಸುಪ್ರೀಂಕೋರ್ಟ್ಗೆ ಮೊರೆಹೋಗಿದ್ದಾರೆ.
2024ನೇ ಸಾಲಿನ ನೀಟ್ ಪರೀಕ್ಷೆಯು ಕಳೆದ ತಿಂಗಳ 5 ರಂದು ನಡೆದಿತ್ತು, ದೇಶದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಹಾಗೂ ಇತರೆ ಕೋರ್ಸ್ಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಈ ಪರೀಕ್ಷೆಯನ್ನು ನಡೆಸಿತ್ತು.
ಜೂನ್ 4ರಂದು ಪ್ರಕಟವಾದ ನೀಟ್ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳ ಕೌನ್ಸೆಲಿಂಗ್ಗೆ ತಡೆಯಾಜ್ಞೆ ನೀಡಬೇಕು ಮತ್ತು ಹೊಸದಾಗಿ ನೀಟ್ ಯುಜಿ ಪರೀಕ್ಷೆಯನ್ನು ನಡೆಸಬೇಕು ಎಂದು ಅರ್ಜಿಗಳು ಒತ್ತಾಯಿಸಿದ್ದವು.
ನೀಟ್ ಪರೀಕ್ಷೆ ಬರೆದ ಆಂಧ್ರಪ್ರದೇಶ ವಿದ್ಯಾರ್ಥಿಯೊಬ್ಬರು ಅರ್ಜಿ ಸಲ್ಲಿಸಿದ್ದು, ಸಮಯದ ನಷ್ಟದ ಆಧಾರದ ಮೇಲೆ 1536 ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡುವ ಎನ್ಟಿಎ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.