ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶಾತಿ ಪದವಿ ಪರೀಕ್ಷೆ (ನೀಟ್ ಪದವಿ ಪ್ರವೇಶಾತಿ ಪರೀಕ್ಷೆ- 2024) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಆರೋಪಿಗಳನ್ನು ವಶಕ್ಕೆ ಪಡೆಯಲು ಪಾಟ್ನಾ ಹೈಕೋರ್ಟ್ ಶುಕ್ರವಾರ ಸಿಬಿಐಗೆ ಅನುಮತಿ ನೀಡಿದೆ.
ಆರೋಪಿಗಳ ಬಂಧನಕ್ಕೆ ಅನುಮತಿ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ವಿಶೇಷ ಮ್ಯಾಜಿಸ್ಟ್ರೇಟ್ ಜುಲೈ 2ರಂದು ತಿರಸ್ಕರಿಸಿದ್ದರು.
ಆದರೆ ಪ್ರಕರಣದ ಗಂಭೀರತೆಯನ್ನು ಗಮನಿಸಿ ಸಿಬಿಐ ವಿಶೇಷ ಮ್ಯಾಜಿಸ್ಟ್ರೇಟ್ ಆದೇಶಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಸಂದೀಪ್ ಕುಮಾರ್ ಜುಲೈ 12ರ ಆದೇಶದ ಮೂಲಕ ತಡೆ ನೀಡಿದ್ದಾರೆ.
ಆದೇಶದಂತೆ ಆರೋಪಿಗಳನ್ನು ಹದಿನೈದು ದಿನಗಳ ಕಾಲಸಿಬಿಐ ವಶಕ್ಕೆ ನೀಡಲಾಗಿದೆ.
ಸದ್ಯ ಆರೋಪಿಗಳನ್ನು ಬಂಧಿಸಿರುವ ಜೈಲು ಸೂಪರಿಂಟೆಂಡೆಂಟ್ ಅವರು ಶುಕ್ರವಾರವೇ (ಜುಲೈ 12) ಯಾವುದೇ ವಿಳಂಬ ಮಾಡದೆ ಸಿಬಿಐಗೆ ಹಸ್ತಾಂತರಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಸಿಬಿಐ ಪರ ವಕೀಲ ಅವನೀಶ್ ಕುಮಾರ್ ಸಿಂಗ್ ವಾದ ಮಂಡಿಸಿದರೆ, ಹದಿಮೂರು ಆರೋಪಿಗಳ ಪರ ವಕೀಲ ಜಾರ್ಖಂಡಿ ಉಪಾಧ್ಯಾಯ ವಾದ ಮಂಡಿಸಿದರು.
ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ, ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವ ಅಥವಾ ಮರುಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿತ್ತು.
ಅದರಲ್ಲಿಯೂ, ಪಾಟ್ನಾದಲ್ಲಿ ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಕಂಡುಬಂದಿಲ್ಲ ಎಂದು ಎನ್‌ಟಿಎ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.