ಮನೆ ಕಾನೂನು ಮೈಸೂರಿನ ಮಣಿಪಾಲ್‌ ಆಸ್ಪತ್ರೆಯಿಂದ ಕರ್ತವ್ಯಲೋಪ: ₹30 ಸಾವಿರ ಪರಿಹಾರಕ್ಕೆ ಆದೇಶ

ಮೈಸೂರಿನ ಮಣಿಪಾಲ್‌ ಆಸ್ಪತ್ರೆಯಿಂದ ಕರ್ತವ್ಯಲೋಪ: ₹30 ಸಾವಿರ ಪರಿಹಾರಕ್ಕೆ ಆದೇಶ

0

ರೋಗಿಯೊಬ್ಬರ ಹಣೆಯಲ್ಲಿನ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಅದರ ಅಂಗಾಂಶ ಪರೀಕ್ಷೆ (ಬಯಾಪ್ಸಿ) ನೀಡುವುದಕ್ಕೂ ಮುನ್ನ ಗಡ್ಡೆ ಮಾದರಿಯನ್ನು ವಿಸರ್ಜಿಸುವ ಮೂಲಕ ಕರ್ತವ್ಯ ಲೋಪ ಎಸಗಿರುವ ಮೈಸೂರಿನ ಪ್ರತಿನಿಷ್ಠಿತ ಮಣಿಪಾಲ್‌ ಆಸ್ಪತ್ರೆ ಮತ್ತು ಅದರ ಮಾತೃ ಸಂಸ್ಥೆಯು ದೂರುದಾರರಿಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಮೈಸೂರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಈಚೆಗೆ ಆದೇಶಿಸಿದೆ.

ಮೈಸೂರಿನ ಚಾಮರಾಜ ಮೊಹಲ್ಲಾದ ಎ ವಿ ಆನಂದರಾಮ್‌ ಎಂಬವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿರುವ ಆಯೋಗದ ಅಧ್ಯಕ್ಷ ಬಿ ನಾರಾಯಣಪ್ಪ, ಸದಸ್ಯರಾದ ಎಂ ಕೆ ಲಲಿತಾ ಮತ್ತು ಮಾರುತಿ ವಡ್ಡರ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ದಾವೆಗಾಗಿ ಖರ್ಚಿನ ಬಾಬ್ತು 5 ಸಾವಿರ ರೂಪಾಯಿ ಪಾವತಿಸಲು ಆಸ್ಪತ್ರೆ ಆಡಳಿತಕ್ಕೆ ಆದೇಶ ಮಾಡಿದೆ. ಎರಡು ತಿಂಗಳ ಒಳಗೆ ಪರಿಹಾರದ ಹಣ ಪಾವತಿಸಬೇಕು. ತಪ್ಪಿದ್ದಲ್ಲಿ ವಾರ್ಷಿಕ ಶೇ. 10ರಷ್ಟು ಬಡ್ಡಿ ಅನ್ವಯಿಸಲಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.

ದೂರುದಾರರಿಗೆ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾದ ಗಡ್ಡೆಯಯನ್ನು (ಲಿಪೊಮಾ) ಮಣಿಪಾಲ್‌ ಆಸ್ಪತ್ರೆಯವರು ವಿಸರ್ಜಿಸಿದ್ದಾರೆ. ಇದು ಸೇವಾ ವೈಫಲ್ಯವಲ್ಲದೇ ಮತ್ತೇನು ಅಲ್ಲ. ಹೀಗಾಗಿ ಮಣಿಪಾಲ್‌ ಹೆಲ್ತ್‌ ಎಂಟರ್‌ಪ್ರೈಸಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಮಣಿಪಾಲ್‌ ಆಸ್ಪತ್ರೆಯು ದೂರುದಾರರಿಗೆ ಒಟ್ಟಾರೆ ಪರಿಹಾರವಾಗಿ 30 ಸಾವಿರ ರೂಪಾಯಿ ಪಾವತಿಸಬೇಕು. ದೂರುದಾರರು ಮೊದಲಿಗೆ 10 ಲಕ್ಷ ರೂಪಾಯಿ ಪರಿಹಾರ ಕೋರಿದ್ದು, ಬಳಿಕ ಅರ್ಜಿ ತಿದ್ದುಪಡಿ ಮಾಡಿ 20 ಲಕ್ಷ ರೂಪಾಯಿ ಪರಿಹಾರ ಕೋರಿದ್ದಾರೆ. ಇದು ದುಬಾರಿಯಾಯಿತು ಎಂದು ಆಯೋಗವು ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಆನಂದರಾಮ್‌ ಅವರಿಗೆ 15 ವರ್ಷಗಳ ಹಿಂದೆ ತಲೆಗೆ ಗಾಯವಾಗಿದ್ದು, ಇದರಿಂದ ಹಣೆಯಲ್ಲಿ ಗಡ್ಡೆ ಕಾಣಿಸಿಕೊಂಡಿತ್ತು. ಗಡ್ಡೆ ಇರುವುದರಿಂದ ಚೆನ್ನಾಗಿ ಕಾಣುವುದಿಲ್ಲ ಎಂದು ಅದನ್ನು ತೆಗೆಸುವ ಉದ್ದೇಶದಿಂದ ಅವರು 2017ರ ಜುಲೈ 11ರಂದು ಮೈಸೂರಿನ ಮಣಿಪಾಲ್‌ ಆಸ್ಪತ್ರೆಗೆ ತೆರೆಳಿದ್ದರು. ಡಾ. ಶ್ರೀಹರ್ಷ ಅವರ ಸಲಹೆಯಂತೆ ಗಡ್ಡೆ ತೆಗೆಸಿದ್ದರು. ಗಡ್ಡೆ ತೆಗೆಯುವ ಶಸ್ತ್ರಚಿಕಿತ್ಸೆ ಮತ್ತು ಅಂಗಾಂಶ ಪರೀಕ್ಷೆಗಾಗಿ ಆನಂದರಾಮ್‌ ಅವರು 7,980 ರೂಪಾಯಿ ಪಾವತಿಸಿದ್ದರು. ಸ್ಥಳೀಯ ಅರವಳಿಕೆ ನೀಡಿ 2017ರ ನವೆಂಬರ್‌ 4ರಂದು ಗಡ್ಡೆ ತೆಗೆಯಲಾಗಿತ್ತು. ಆನಂತರ ದೂರುದಾರರು ಅಂಗಾಂಶ ಪರೀಕ್ಷೆ ವರದಿ ನೀಡುವಂತೆ ಆಸ್ಪತ್ರೆ ಆಡಳಿತಕ್ಕೆ ಕೋರಿದ್ದರು.

ಸಬೂಬುಗಳನ್ನು ನೀಡಿ ಸಾಗ ಹಾಕಿದ್ದ ಆಸ್ಪತ್ರೆ ಸಿಬ್ಬಂದಿಯು ಅಂತಿಮವಾಗಿ 2017ರ ನವೆಂಬರ್‌ 16ರಂದು ದೂರುದಾರರ ಹಣೆಯಿಂದ ಶಸ್ತ್ರಚಿಕಿತ್ಸೆಯಿಂದ ತೆಗೆಯಲಾದ ಗಡ್ಡೆಯನ್ನು ಪ್ರಯೋಗಾಲಯದಲ್ಲಿದ್ದ ಸಿಬ್ಬಂದಿ ಕಳೆದು ಬಿಟ್ಟಿದ್ದಾರೆ. ಹೀಗಾಗಿ, ಅಂಗಾಂಶ ಪರೀಕ್ಷೆ ವರದಿ ನೀಡಲಾಗದು ಎಂದಿದ್ದರು. ಬದಲಿಗೆ, ಅಂಗಾಂಶ ಪರೀಕ್ಷೆ ವರದಿಗಾಗಿ ಸ್ವೀಕರಿಸಿದ್ದ 1 ಸಾವಿರ ರೂಪಾಯಿ ಶುಲ್ಕವನ್ನು ಚೆಕ್‌ ಮೂಲಕ ಮರಳಿಸಿದ್ದರು. ಗಡ್ಡೆಯ ಅಂಗಾಂಶ ಪರೀಕ್ಷೆ ಮಾಡಿ, ಅದರಲ್ಲಿ ಕ್ಯಾನ್ಸರ್‌ ಸೆಲ್‌ಗಳು ಇವೆಯೇ ಎಂಬುದನ್ನು ತಿಳಿದುಕೊಂಡು ಅದರ ಅನ್ವಯ ದೂರುದಾರರಿಗೆ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದರು. ಆಸ್ಪತ್ರೆಯ ಸಿಬ್ಬಂದಿಯ ಕರ್ತವ್ಯ ಲೋಪದಿಂದ ಬೇಸತ್ತು ದೂರುದಾರರು 2017ರ ಡಿಸೆಂಬರ್‌ 11ರಂದು ಆಸ್ಪತ್ರೆಗೆ ಕಾನೂನು ಪ್ರಕಾರ ನೋಟಿಸ್‌ ಜಾರಿ ಮಾಡಿ, 10 ಲಕ್ಷ ರೂಪಾಯಿ ಪರಿಹಾರ ಕೋರಿದ್ದರು. ಆನಂತರ ಅರ್ಜಿ ತಿದ್ದುಪಡಿ ಮಾಡಿ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.

ಇದಕ್ಕೆ ನಿರಾಕರಿಸಿದ್ದ ಆಸ್ಪತ್ರೆ ಆಡಳಿತವು ಯಾವುದೇ ಶುಲ್ಕ ವಿಧಿಸಿದೇ ಪಿಇಟಿ –ಸಿ ಟಿ ಸ್ಕ್ಯಾನ್‌ ಮಾಡುವ ಮೂಲಕ ಸಮಸ್ಯೆ ಪತ್ತೆ ಹಚ್ಚುವುದಾಗಿ ದೂರುದಾರರಿಗೆ ತಿಳಿಸಿತ್ತು. ಇದಕ್ಕೆ ದೂರುದಾರರು ಒಪ್ಪಿರಲಿಲ್ಲ. ಈ ಸಂಬಂಧ ಎಲ್ಲಾ ವಾಸ್ತವಿಕ ಅಂಶಗಳು ಮತ್ತು ದಾಖಲೆಯನ್ನು ಪರಿಶೀಲಿಸಿ ಆಯೋಗವು ಆದೇಶ ಮಾಡಿದೆ.

ದೂರುದಾರರ ಪರವಾಗಿ ವಕೀಲ ಜೆರಾಲ್ಡ್ಕಾಸ್ಟೆಲಿನೊ ಹಾಗೂ ಆಸ್ಪತ್ರೆಯನ್ನು ವಕೀಲ ಎಚ್ಪಿ ರಕ್ಷಿತ್ ಪ್ರತಿನಿಧಿಸಿದ್ದರು.