ನವದೆಹಲಿ: ನೇತಾಜಿ ಅವರ ಸಿದ್ಧಾಂತವನ್ನು ಪ್ರಚಾರ ಮಾಡಲು ಬಿಜೆಪಿ ಪಕ್ಷದ ಕೇಂದ್ರ ನಾಯಕತ್ವ ಮತ್ತು ಪಶ್ಚಿಮ ಬಂಗಾಳದ ನಾಯಕತ್ವದ ಬೆಂಬಲ ನೀಡದ ಕಾರಣಕ್ಕಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಅವರು ಬುಧವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ರಾಜೀನಾಮೆ ನೀಡಿದ್ದಾರೆ.
ಚಂದ್ರಬೋಸ್ ಅವರು 2016 ರಲ್ಲಿ ಬಿಜೆಪಿ ಸೇರಿದ್ದರು ಮತ್ತು 2016 ರ ವಿಧಾನಸಭೆ ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರಿಗೆ ಚಂದ್ರಬೋಸ್ ಅವರು ಬರೆದ ಪತ್ರದಲ್ಲಿ “ನಾನು ಬಿಜೆಪಿಗೆ ಸೇರಿದಾಗ, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಶರತ್ ಚಂದ್ರ ಬೋಸ್ ಅವರ ಅಂತರ್ಗತ ಸಿದ್ಧಾಂತವನ್ನು ಪ್ರಚಾರ ಮಾಡಲು ನನಗೆ ಅವಕಾಶ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಅವಕಾಶ ಸಿಗಲೇ ಇಲ್ಲ.
ಅಲ್ಲದೆ “ಬಿಜೆಪಿಯೊಂದಿಗಿನ ನನ್ನ ಚರ್ಚೆಗಳು ಬೋಸ್ ಸಹೋದರರ (ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಶರತ್ ಚಂದ್ರ ಬೋಸ್) ಅಂತರ್ಗತ ಸಿದ್ಧಾಂತದ ಮೇಲೆ ಕೇಂದ್ರೀಕೃತವಾಗಿತ್ತು, ಆ ಸಮಯದಲ್ಲಿ ಮತ್ತು ನಂತರ ನಾನು ಪ್ರಚಾರ ಮಾಡುತ್ತೇನೆ ಎಂದು ನನ್ನ ತಿಳುವಳಿಕೆಯಾಗಿತ್ತು. ಈ ಶ್ಲಾಘನೀಯ ಉದ್ದೇಶಗಳನ್ನು ಸಾಧಿಸುವ ನನ್ನ ಉತ್ಕಟ ಪ್ರಚಾರದ ಪ್ರಯತ್ನಗಳಿಗೆ ಕೇಂದ್ರದಲ್ಲಿ ಅಥವಾ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ಯಾವುದೇ ಬೆಂಬಲ ಸಿಕ್ಕಿಲ್ಲ. ರಾಜ್ಯದ ಜನರನ್ನು ತಲುಪಲು ಬಂಗಾಳ ಕಾರ್ಯತಂತ್ರವನ್ನು ಸೂಚಿಸುವ ವಿವರವಾದ ಪ್ರಸ್ತಾವನೆಯನ್ನು ನಾನು ಮುಂದಿಟ್ಟಿದ್ದೆ, ಆದರೆ ನನ್ನ ಪ್ರಸ್ತಾಪಗಳನ್ನು ನಿರ್ಲಕ್ಷಿಸಲಾಗಿದೆ, ”ಎಂದು ಅವರು ಹೇಳಿದರು.