ಮೈಸೂರು(Mysuru): ದಕ್ಷಿಣ ಭಾರತದಲ್ಲಿ ಶೋಷಿತರು, ದಲಿತರು ಹಾಗೂ ಹಿಂದುಳಿದ ವರ್ಗದವರನ್ನು ಒಂದುಗೂಡಿಸುವ ಉದ್ದೇಶದಿಂದ ಮತ್ತು ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡಲಾಗುತ್ತಿದೆ ಎಂದು ರಾಜ್ಯ ಸಮಿತಿಯ ಅಧ್ಯಕ್ಷ ಎನ್.ಮೂರ್ತಿ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮ್ಮೇಳನ ಮತ್ತು ಹೊಸ ರಾಜಕೀಯ ಪಕ್ಷದ ಘೋಷಣೆ ಸಮಾರಂಭವನ್ನು ಸೆ.14ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಸರನ್ನು ಅಂದೇ ಪ್ರಕಟಿಸಲಾಗುವುದು. ಚಿಹ್ನೆ ಹಾಗೂ ಬಾವುಟವನ್ನೂ ಅನಾವರಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯ ಮತ್ತು ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ರಾಜಕೀಯ, ಆರ್ಥಿಕ, ಸಾಮಾಜಿಕ ಸ್ಥಾನಮಾನ ಮತ್ತು ಸಮಾನತೆಗಾಗಿ ಹಲವು ಗೊತ್ತುವಳಿಗಳನ್ನು ಸ್ವೀಕರಿಸಲಾಗುವುದು. ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾಗಿದೆ. ಸ್ವಾತಂತ್ರ್ಯ ನಂತರ ದಕ್ಷಿಣ ಭಾರತದ ಶೋಷಿತರ ನಾಯಕತ್ವದಲ್ಲಿ ನೋಂದಣಿಯಾಗಿದೆ. 3 ವರ್ಷಗಳಿಂದ ನಡೆಸಿದ ಚರ್ಚೆಯ ಫಲವಾಗಿ ಪಕ್ಷ ರಚಿಸಲಾಗುತ್ತಿದೆ. 15ಕ್ಕೂ ಹೆಚ್ಚು ಸಮಾನ ಮನಸ್ಕ ಸಂಘಟನೆಗಳು ಹಾಗೂ ಬುದ್ಧಿಜೀವಿಗಳೊಂದಿಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಬಹುಜನರ ಹಿತರಕ್ಷಣೆ ಮುಖ್ಯ ಧ್ಯೇಯವಾಗಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ತತ್ವ–ಸಿದ್ಧಾಂತದ ಅನುಷ್ಠಾನಕ್ಕೆ ಶ್ರಮಿಸಲಿದೆ ಎಂದರು.
ಸದ್ಯ, ಹಿಂದುಳಿದವರಿಗೆ ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಾತಿನಿಧ್ಯ ಸಿಗುತ್ತಿಲ್ಲ. ರಾಜ್ಯ ಸರ್ಕಾರವು ಗುಣಮಟ್ಟದ ಶಿಕ್ಷಣ ನೀಡುವ ಬದಲಿಗೆ, ಪಠ್ಯ ಪರಿಷ್ಕರಣೆ ನೆಪದಲ್ಲಿ ಕೇಸರೀಕರಣಕ್ಕೆ ಮುಂದಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹೆಚ್ಚಿನ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡುತ್ತಿಲ್ಲ. ಮೀಸಲಿಟ್ಟ ಅಲ್ಪ ಅನುದಾನವನ್ನೂ ಬೇರೆ ಕಾಮಗಾರಿಗಳಿಗೆ ಬಳಸಲಾಗುತ್ತಿದೆ’ ಎಂದು ಆರೋಪಿಸಿದರು.
ಸರ್ಕಾರವು ದಲಿತರ ಪರವಿಲ್ಲ. ದಲಿತರನ್ನು ಶೋಷಿಸುವ ಕಾರ್ಪೊರೇಟ್ ಕಂಪನಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಪರಿಶಿಷ್ಟರ ಮೇಲೆ ದೌರ್ಜನ್ಯ ಮುಂದುವರಿದಿದೆ. ಆದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಮುಖಂಡರಾದ ಕೋದಂಡರಾಮ ಮತ್ತು ಮಂಜು ಪಾಲ್ಗೊಂಡಿದ್ದರು.