ಮನೆ ರಾಜಕೀಯ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಸಚಿವ ಈಶ್ವರಪ್ಪ ರಾಜೀನಾಮೆ ಘೋಷಣೆ

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಸಚಿವ ಈಶ್ವರಪ್ಪ ರಾಜೀನಾಮೆ ಘೋಷಣೆ

0

ಬೆಂಗಳೂರು(Bengaluru)/ಶಿವಮೊಗ್ಗ(Shivamogga): ಗುತ್ತಿಗೆದಾರ ಸಂತೋಷ್‌ ಪಾಟೀಲ(Santhosh Patil) ಆತ್ಮಹತ್ಯೆ(Suicide) ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ(K.S.Eshwarappa), ವರಿಷ್ಠರ ಸೂಚನೆಯಂತೆ ಶುಕ್ರವಾರ ರಾಜೀನಾಮೆ(Resignation) ನೀಡುವುದಾಗಿ ಘೋಷಿಸಿದ್ದಾರೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ವರಿಷ್ಠರು ನೀಡಿದ್ದ ಸೂಚನೆಯನ್ನು ಕಡೆಗಣಿಸಿ ಶಿವಮೊಗ್ಗದಲ್ಲಿ ಉಳಿದುಕೊಂಡಿದ್ದ ಈಶ್ವರಪ್ಪ, ಪ್ರಾಥಮಿಕ ತನಿಖೆಯ ವರದಿ ಬರುವವರೆಗೂ ಮುಂದುವರಿಯುವುದಾಗಿ ಪಟ್ಟು ಹಿಡಿದಿದ್ದರು. ಕಾಂಗ್ರೆಸ್‌ ಮುಖಂಡರು ವಿಧಾನಸೌಧದ ಮುಂದೆ ಅಹೋರಾತ್ರಿ ಧರಣಿ ಆರಂಭಿಸುತ್ತಿದ್ದಂತೆಯೇ ಪುನಃ ಮಧ್ಯಪ್ರವೇಶ ಮಾಡಿದ ಬಿಜೆಪಿ ವರಿಷ್ಠರು, ತಕ್ಷಣ ರಾಜೀನಾಮೆ ಕೊಡುವಂತೆ ಸಂದೇಶ ರವಾನಿಸಿದರು. ಅದರ ಬೆನ್ನಲ್ಲೇ ಗುರುವಾರ ಸಂಜೆ ಶಿವಮೊಗ್ಗದಲ್ಲಿ ದಿಢೀರ್‌ ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪ ನಿರ್ಧಾರ ಪ್ರಕಟಿಸಿದರು.

‘ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ತಪ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶುಕ್ರವಾರ ಭೇಟಿಯಾಗಿ ರಾಜೀನಾಮೆ ನೀಡುತ್ತಿದ್ದೇನೆ’ ಎಂದರು.

‘ನಾನು ಯಾವ ತಪ್ಪನ್ನೂ ಮಾಡಿಲ್ಲ. ಸಣ್ಣ ತಪ್ಪು ಮಾಡಿದ್ದರೂ ನನ್ನ ಮನೆ ದೇವರಾದ ಚೌಡೇಶ್ವರಿ ನೋಡಿಕೊಳ್ಳುತ್ತಾಳೆ’ ಎಂದು ಹೇಳುತ್ತಾ ಈಶ್ವರಪ್ಪ ಗದ್ಗದಿತರಾದರು.

‘ಬಾಕಿ ಬಿಲ್‌ ಪಾವತಿಗೆ ಶೇಕಡ 40ರಷ್ಟು ಲಂಚಕ್ಕೆ ಈಶ್ವರಪ್ಪ ಬೇಡಿಕೆ ಇಟ್ಟಿದ್ದಾರೆ’ ಎಂದು ಆರೋಪಿಸಿದ್ದ ಸಂತೋಷ್‌ ಉಡುಪಿಯ ಲಾಡ್ಜ್‌ ಒಂದರಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿರುವುದು ಮಂಗಳವಾರ ಬಹಿರಂಗವಾಗಿತ್ತು.  ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳಾದ ಕಾಂಗ್ರೆಸ್‌, ಎಎಪಿ ಪ್ರತಿಭಟನೆ ಆರಂಭಿಸಿದ್ದವು.

ಮೃತ ಗುತ್ತಿಗೆದಾರ ಸಾವಿಗೂ ಮುನ್ನ ವಾಟ್ಸ್‌ ಆ್ಯಪ್‌ ಮೂಲಕ ಕಳುಹಿಸಿದ ಸಂದೇಶ ಹಾಗೂ ಕುಟುಂಬದವರು ನೀಡಿದ ದೂರನ್ನು ಆಧರಿಸಿ ಈಶ್ವರಪ್ಪ ಮತ್ತು ಇತರರ ವಿರುದ್ಧ ಬುಧವಾರ ಪ್ರಕರಣ ದಾಖಲು ಮಾಡಲಾಗಿತ್ತು. ಆ ಬಳಿಕ ರಾಜೀನಾಮೆಗೆ ಒತ್ತಡ ಮತ್ತಷ್ಟು ಹೆಚ್ಚಿತ್ತು.

ಹಿಂದಿನ ಲೇಖನಬುರ್ಖಾ ಅನಾರೋಗ್ಯಕರ ಪದ್ದತಿ ಎಂಬುದನ್ನು ಡಾ.ಬಿ.ಆರ್.ಅಂಬೇಡ್ಕರ್ ಗ್ರಹಿಸಿದ್ದರು: ವಾದಿರಾಜ್
ಮುಂದಿನ ಲೇಖನಅಗತ್ಯವಿದ್ದರಷ್ಟೇ ಸಚಿವ ಈಶ್ವರಪ್ಪ ಬಂಧನ: ಸಿಎಂ ಬೊಮ್ಮಾಯಿ