ವೆಲ್ಲಿಂಗ್ಟನ್: ಮುಂಬರುವ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ನ್ಯೂಜಿಲ್ಯಾಂಡ್ ತಂಡ ಪ್ರಕಟಿಸಿದ್ದು, ವೇಗಿ ಲ್ಯೂಕಿ ಫರ್ಗ್ಯುಸನ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ತಂಡದ ಹಿರಿಯ ಸದಸ್ಯರಿಗೆ ವಿಶ್ರಾಂತಿ ನೀಡಲಾಗಿದ್ದು, ಎರಡನೇ ದರ್ಜೆಯ ತಂಡವನ್ನು ಬಾಂಗ್ಲಾ ಸರಣಿಗೆ ಆಯ್ಕೆ ಮಾಡಲಾಗಿದೆ.
ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಗಾಗಿ ಇಂಗ್ಲೆಂಡ್ ಪ್ರವಾಸದ ನಂತರ ಹಲವು ಪ್ರಮುಖ ಆಟಗಾರರಿಗೆ ವಿರಾಮ ನೀಡಲಾಗಿದೆ.
ನಾಯಕ ಕೇನ್ ವಿಲಿಯಮ್ಸನ್ ಅವರು ಇನ್ನೂ ಫಿಟ್ ಆಗಿಲ್ಲ. ಸ್ಟ್ಯಾಂಡ್ ಇನ್ ನಾಯಕ ಟಾಮ್ ಲ್ಯಾಥಮ್, ವಿಕೆಟ್ ಕೀಪರ್-ಬ್ಯಾಟರ್ ಗಳಾದ ಡೆವೊನ್ ಕಾನ್ವೇ ಮತ್ತು ಗ್ಲೆನ್ ಫಿಲಿಪ್ಸ್, ಆಲ್ ರೌಂಡರ್ ಗಳಾದ ಡೇರಿಲ್ ಮಿಚೆಲ್ ಮತ್ತು ಮಿಚೆಲ್ ಸ್ಯಾಂಟ್ನರ್, ವೇಗಿಗಳಾದ ಮ್ಯಾಟ್ ಹೆನ್ರಿ ಮತ್ತು ಟಿಮ್ ಸೌಥಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಹೊಸ ಆಟಗಾರ ಡೀನ್ ಫಾಕ್ಸ್ ಕ್ರಾಫ್ಟ್ ಅವರನ್ನು ತಂಡದಲ್ಲಿ ಸೇರಿಸಲಾಗಿದೆ. ಢಾಕಾದಲ್ಲಿ ಸೆಪ್ಟೆಂಬರ್ 21, 23 ಮತ್ತು 26 ರಂದು ನಡೆಯಲಿರುವ ಮೂರು ಪಂದ್ಯಗಳಿಗೆ ಬ್ಯಾಟಿಂಗ್ ಕೋಚ್ ಲ್ಯೂಕ್ ರಾಂಕಿ ಅವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಿದ್ದು, ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಗೆ ವಿರಾಮ ನೀಡಲಾಗಿದೆ.
ತಂಡ: ಲ್ಯೂಕಿ ಫರ್ಗ್ಯುಸನ್ (ನಾ), ಫಿನ್ ಅಲೆನ್, ಟಾಮ್ ಬ್ಲಂಡೆಲ್, ಟ್ರೆಂಟ್ ಬೌಲ್ಟ್, ಚಾಡ್ ಬೋವ್ಸ್, ಡೇನ್ ಕ್ಲೀವರ್, ಡೀನ್ ಫಾಕ್ಸ್ ಕ್ರಾಫ್ಟ್, ಕೈಲ್ ಜೇಮಿಸನ್, ಕೋಲ್ ಮೆಕ್ ಕಾಂಚಿ, ಆಡಮ್ ಮಿಲ್ನೆ, ಹೆನ್ರಿ ನಿಕೋಲ್ಸ್, ರಚಿನ್ ರವೀಂದ್ರ, ಇಶ್ ಸೋಧಿ, ಬ್ಲೇರ್ ಟಿಕ್ನರ್, ವಿಲ್ ಯಂಗ್.