ಮನೆ ಸ್ಥಳೀಯ ಜೆಡಿಎಸ್ ನ ಯಾವೊಬ್ಬ ಶಾಸಕರು, ಮುಖಂಡರು ಪಕ್ಷ ತೊರೆಯುವುದಿಲ್ಲ: ಜಿ.ಟಿ ದೇವೇಗೌಡ

ಜೆಡಿಎಸ್ ನ ಯಾವೊಬ್ಬ ಶಾಸಕರು, ಮುಖಂಡರು ಪಕ್ಷ ತೊರೆಯುವುದಿಲ್ಲ: ಜಿ.ಟಿ ದೇವೇಗೌಡ

0

ಮೈಸೂರು: ಜೆಡಿಎಸ್ ನ ಯಾವೊಬ್ಬ ಶಾಸಕರು, ಮುಖಂಡರು ಪಕ್ಷ ತೊರೆಯುವುದಿಲ್ಲ ಎಂದು ಜೆಡಿಎಸ್ ನ ಹಿರಿಯ ಶಾಸಕ ಹಾಗೂ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಮೈಸೂರಿನಲ್ಲಿ ಹೇಳಿದ್ದಾರೆ.


ಕಾಂಗ್ರೆಸ್ ಪಕ್ಷ 135 ಸ್ಥಾನ ಗಳಿಸಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಕೆರೆ ಇದೀಗ ತುಂಬಿ ತುಳುಕಾಡುತ್ತಿದ್ದು, ಭರ್ತಿಯಾಗಿದೆ. ಬೇರೆಯವರನ್ನು ಸೇರಿಸಿಕೊಂಡರೆ ಕೆರೆ ಒಡೆದು ಹೋಗುತ್ತದೆ. ಈಗಾಗಲೇ ಕಾಂಗ್ರೆಸ್ ನ ಹಲವು ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ.

ಶಾಸಕ ಬಸವರಾಜ ರಾಯರೆಡ್ಡಿಯವರೇ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ನಡುವೆಯೇ ಅಸಮಾಧಾನವಿದೆ. ಮಾಜಿ ಸಚಿವ ಪುಟ್ಟರಾಜು ಕೂಡ ಜೆಡಿಎಸ್ ಕೋರ್ ಕಮಿಟಿ ಸದಸ್ಯರಾಗಿದ್ದಾರೆ. ನಿನ್ನೆ ನಡೆದ ಸಭೆಯಲ್ಲಿ ಅವರು ಕೂಡ ಭಾಗಿಯಾಗಿದ್ದರು. ಪುಟ್ಟರಾಜು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ನಮ್ಮೊಂದಿಗೇ ಇದ್ದುಕೊಂಡು ಜೆಡಿಎಸ್ ಬಲವರ್ಧನೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದೊಂದಿಗೆ ಸ್ಪರ್ಧಿಸಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದಿಲ್ಲ. ಒಂದು ಸೀಟು ಗೇಲ್ತೀವೋ, ಐದು ಸೀಟು ಗೆಲ್ತೀವೋ, ಹತ್ತು ಸೀಟು ಗೆಲ್ತೀವೋ ಗೊತ್ತಿಲ್ಲ. ಆದರೆ ಜೆಡಿಎಸ್ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಸ್ಪರ್ಧಿಸಲಿದೆ.
ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧಿಸಲಿದೆ. ನಮಗೆ ಹೊಂದಾಣಿಕೆಯ ಅವಶ್ಯಕತೆ ಇಲ್ಲ.
ನಮ್ಮ ಶಕ್ತಿಯ ಅನುಸಾರ ಸ್ಪರ್ಧಿಸುತ್ತೇವೆ. ಸಾ ರಾ ಮಹೇಶ್, ಪುಟ್ಟರಾಜು ಸೇರಿದಂತೆ ಯಾರು ಬೇಕಾದರೂ ಸ್ಪರ್ಧಿಸಬಹುದು. ಪಕ್ಷ ಸೂಚಿಸಿದರೆ ನಾನು ಕೂಡ ಸ್ಪರ್ಧಿಸಲು ಸಿದ್ದನಿದ್ದೇನೆ.

ಸಿದ್ದರಾಮಯ್ಯ ಅವರಿಗೆ ಒಳ್ಳೆಯ ಫಲವತ್ತಾದ ನೆಲ ಸಿಕ್ಕಿಬಿಟ್ಟಿದೆ. ಒಳ್ಳೆಯ ಗಿಡ,ಗೊಬ್ಬರ, ನೀರು ಸಿಕ್ಕಿ ಚೆನ್ನಾಗಿ ಬೆಳೆದಿದ್ದಾರೆ. ಈಗ ಏನಿದ್ದರೂ ಫಸಲು ಕೊಯ್ಯುವ ಕಾಲ ಅವರು ಸಮೃದ್ಧಿಯಾಗಿ ಬೆಳೆದಿದ್ದಾರೆ. ನಾವು ಇನ್ನೂ ಬರಡು ಭೂಮಿಯಲ್ಲಿದ್ದೇವೆ. ಅವರೊಂದಿಗೆ ನನ್ನನ್ಯಾಕಪ್ಪಾ ಹೋಲಿಸುತ್ತೀರಾ..? ಎಂದು ಮಾಧ್ಯಮಗಳ ಪ್ರಶ್ನೆಗೆ ಜಿಟಿಡಿ ಹಾಸ್ಯ ಚಟಾಕಿ ಹಾರಿಸಿದರು.

ಅವರೇನಿದ್ರು ಮೋದಿ ಜೊತೆ ಫೈಟಿಂಗ್. ಸಿದ್ದರಾಮಯ್ಯ ವರ್ಸಸ್ ಮೋದಿ ಹೊರತು ಸಿದ್ದರಾಮಯ್ಯ ವರ್ಸಸ್ ಜಿಟಿ ದೇವೇಗೌಡ ಅಲ್ಲ ಎಂದು ಮೈಸೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಮಾರ್ಮಿಕವಾಗಿ ಜಿ.ಟಿ ದೇವೇಗೌಡ ಉತ್ತರ ನೀಡಿದರು.

ಹಿಂದಿನ ಲೇಖನಭಾರತ- ಐರ್ಲೆಂಡ್ ನಡುವಿನ 2ನೇ ಟಿ20 ಪಂದ್ಯದ ಕುರಿತ ಮಾಹಿತಿ ಇಲ್ಲಿದೆ
ಮುಂದಿನ ಲೇಖನಮಂಗಳೂರು: ಸಾರ್ವಜನಿಕವಾಗಿ ಮಟ್ಕಾ ದಂಧೆ ನಡೆಸುತ್ತಿದ್ದ ಇಬ್ಬರ ಬಂಧನ