ಮನೆ ರಾಜಕೀಯ ಎಲ್ಲಾ ಇಲಾಖೆಗಳಲ್ಲಿ ನಗದು ನಿರ್ವಹಣೆ `ವಹಿ’ ಘೋಷಿಸಲು ಸೂಚನೆ

ಎಲ್ಲಾ ಇಲಾಖೆಗಳಲ್ಲಿ ನಗದು ನಿರ್ವಹಣೆ `ವಹಿ’ ಘೋಷಿಸಲು ಸೂಚನೆ

0

ಬೆಂಗಳೂರು: ರಾಜ್ಯ ಸರಕಾರದ ಎಲ್ಲ ಇಲಾಖೆಗಳಲ್ಲಿ ಇನ್ನು ಮುಂದೆ ನಗದು ನಿರ್ವಹಣೆ ವಹಿ ಘೋಷಿಸುವಂತೆ ಸೂಚಿಸಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

ನವೆಂಬರ್ 10ರಂದು ಹೈಕೋರ್ಟ್ ನೀಡಿದ ಸೂಚನೆ ಅನ್ವಯ ಈ ಆದೇಶ ಹೊರಡಿಸಲಾಗಿದ್ದು, ಇನ್ನು ಮುಂದೆ ಸರಕಾರಿ ಇಲಾಖೆಯ ಎಲ್ಲ ನೌಕರರು ತಾವು ಕಚೇರಿಗೆ ಆಗಮಿಸಿದಾಗ ಹಾಗೂ ಹೊರಡುವಾಗ ತಮ್ಮ ಬಳಿ ಇರುವ ನಗದನ್ನು ಘೋಷಿಸುವಂತೆ ಸೂಚನೆ ನೀಡಲಾಗಿದೆ.

ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವುದಕ್ಕಾಗಿ ಈ ನಿಯಮವನ್ನು ಜಾರಿಗೆ ತರಲಾಗುತ್ತಿದ್ದು, ಇದರಿಂದ ಕಚೇರಿ ಅವಧಿಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಮಾಡಬಹುದು ಎಂದು ಸರಕಾರ ಭಾವಿಸಿದೆ.

ಈ ನಿಯಮದ ಪ್ರಕಾರ ಪ್ರತಿಯೊಬ್ಬ ನೌಕರನೂ ಕೆಲಸದ ಆರಂಭದಲ್ಲಿ ನಗದು ಘೋಷಣೆ ವಹಿಯನ್ನು ತೆರೆಯತಕ್ಕದ್ದು. ಹಾಜರಿ ಪುಸ್ತಕ ಅಥವಾ ಎಎಂಎಸ್ ನಲ್ಲಿ ಸಹಿ ಮಾಡಿದ ತಕ್ಷಣ ಈ ಘೋಷಣೆಯಾಗಬೇಕು.

ನಗದು ಘೋಷಣೆ ವಹಿ ಸಂಬಂಧಪಟ್ಟ ವಿಭಾಗ ಅಥವಾ ಶಾಖೆಯ ಗ್ರೂಪ್ ಬಿ ದರ್ಜೆಯ ಅಧಿಕಾರಿಯ ವಶದಲ್ಲಿ ಇರಬೇಕು. ಈ ಅಧಿಕಾರಿ ನಮೂದು ಮಾಡಿದ ಮೊತ್ತದ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿರುತ್ತಾನೆ. ಘೋಷಣೆ ಮಾಡಿದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ಹೊಂದಿದ್ದರೆ ಅದನ್ನು ಅಕ್ರಮ ಸಂಪಾದನೆ ಎಂದು ಪರಿಗಣಿಸಲಾಗುತ್ತದೆ. ಮತ್ತು ಅದನ್ನು ಸಕ್ರಮ ಹಣ ಎಂದು ಸಾಬೀತುಪಡಿಸುವುದು ಆರೋಪಿತ ನೌಕರನ ಹೊಣೆಯಾಗಿರುತ್ತದೆ ಎಂದು ಎಲ್ಲ ಇಲಾಖೆಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.