ಮೈಸೂರು(Mysuru): ಮೈಸೂರು ನಗರದಲ್ಲಿ ಹಾಲಿ ಇದ್ದ ನಾಲ್ಕು ಸಹಾಯಕ ಪೊಲೀಸ್ ಆಯುಕ್ತರ ವಿಭಾಗಗಳನ್ನು ನೂತನವಾಗಿ ಐದಕ್ಕೆ ಏರಿಸಲಾಗಿದೆ. ಹಾಲಿ ಇದ್ದ ನರಸಿಂಹ ರಾಜ ವಿಭಾಗ, ದೇವರಾಜ ವಿಭಾಗ ಮತ್ತು ಕೃಷ್ಣರಾಜ ವಿಭಾಗಗಳಲ್ಲಿ ಕೆಲವು ಠಾಣೆಗಳನ್ನು ನೂತನವಾಗಿ ಸ್ಥಾಪಿತವಾಗಿರುವ ವಿಜಯನಗರ ವಿಭಾಗಕ್ಕೆ ಸೇರಿಸಲಾಗಿದೆ.
ಮೈಸೂರಿನ ವಿಜಯನಗರ ಪೊಲೀಸ್ ಠಾಣೆ, ಸರಸ್ವತಿ ಪುರಂ, ಮೇಟಗಳ್ಳಿ ಹಾಗೂ ಹೆಬ್ಬಾಳ್ ಪೊಲೀಸ್ ಠಾಣೆಗಳನ್ನು ನೂತನ ವಿಜಯನಗರ ವಿಭಾಗಕ್ಕೆ ಸೇರ್ಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೈಸೂರು ನಗರ ಪೊಲೀಸ್ ಇಲಾಖೆಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಕೃಷ್ಣರಾಜ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ, ನರಸಿಂಹರಾಜ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಹಾಗೂ ದೇವರಾಜ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗಳೊಡನೆ ಸಂಚಾರಿ ಪೊಲೀಸ್ ಆಯುಕ್ತರ ವಿಭಾಗವು ಮೈಸೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಪ್ರತಿಯೊಂದು ವಿಭಾಗಗಳು ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಕೆಲಸ ಮಾಡುತ್ತವೆ.
ವಿಜಯನಗರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿ ಅರುಣ್ ನಾಗೇಗೌಡ ?
ಮೈಸೂರು ನಗರದ ಹೊಸ ವಲಯ ವಿಜಯನಗರ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯ ಆಯುಕ್ತರಾಗಿ ಅರುಣ್ ನಾಗೇಗೌಡ ನೇಮಕಗೊಳ್ಳುವ ಸಾಧ್ಯತೆ ಇದೆ.
ಈ ಕುರಿತು ಸದ್ಯದಲ್ಲೇ ಆದೇಶ ಹೊರಬೀಳುವ ಸಾಧ್ಯತೆ ಇದೆ.














