ಮನೆ ರಾಷ್ಟ್ರೀಯ ಆಪರೇಷನ್ ಪಿಂಪಲ್; ಜಮ್ಮು ಕಾಶ್ಮೀರದಲ್ಲಿ ಸೇನೆಯಿಂದ ಎನ್‌ಕೌಂಟರ್‌ – ಭಯೋತ್ಪಾದಕರ ಹತ್ಯೆ

ಆಪರೇಷನ್ ಪಿಂಪಲ್; ಜಮ್ಮು ಕಾಶ್ಮೀರದಲ್ಲಿ ಸೇನೆಯಿಂದ ಎನ್‌ಕೌಂಟರ್‌ – ಭಯೋತ್ಪಾದಕರ ಹತ್ಯೆ

0

ಶ್ರೀನಗರ : ಜಮ್ಮು ಮತ್ತು ಕಾಶ್ಮೀರಲ್ಲಿ ಉಗ್ರರ ಹೆಡೆಮುರಿ ಕಟ್ಟುವ ಸೇನಾ ಕಾರ್ಯ ಮುಂದುವರಿದಿದೆ. ಕುಪ್ವಾರ ಜಿಲ್ಲೆಯ ಕೆರಾನ್‌ ಸೆಕ್ಟರ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಇಂದು ಬೆಳಗ್ಗೆ ಹತ್ಯೆಗೈದಿದೆ.

ಈ ಕುರಿತು ಭಾರತೀಯ ಸೇನೆಯ ಚಿನಾರ್‌ ಕಾರ್ಪ್ಸ್‌ ಎಕ್ಸ್‌ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಕೆರಾನ್‌ನಲ್ಲಿ ಒಳನುಸುಳುವಿಕೆ ಬಗ್ಗೆ ಗುಪ್ತಚರ ಮೂಲಗಳಿಂದ ಖಚಿತ ಮಾಹಿತಿ ಪಡೆದ ಸೇನೆ ʻಆಪರೇಷನ್ ಪಿಂಪಲ್ʼ ಹೆಸರಿನಲ್ಲಿ ಶುಕ್ರವಾರದಿಂದ ಕಾರ್ಯಾಚರಣೆ ಶುರು ಮಾಡಿದೆ ಎಂದು ತಿಳಿಸಿದೆ.

ಕುಪ್ವಾರದ ಕೆರಾನ್‌ ಸೆಕ್ಟರ್‌ನಲ್ಲಿ ಭದ್ರತಾ ಪಡೆಗಳು ಅನುಮಾನಾಸ್ಪದ ಚಟುವಟಿಕೆಗಳನ್ನ ಪತ್ತೆಹಚ್ಚಿದ್ದವು. ಅಷ್ಟರಲ್ಲಿ ಉಗ್ರರು ಮನಸೋಇಚ್ಛೆ ಗುಂಡು ಹಾರಿಸಲು ಶುರು ಮಾಡಿದ್ರು. ಬಳಿಕ ಸೇನೆಯಿಂದಲೂ ಪ್ರತಿದಾಳಿ ನಡೆಸಿದ ಪರಿಣಾಮ ಇಂದು ಬೆಳಗ್ಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ.

ಇಬ್ಬರು ಉಗ್ರರನ್ನು ಹತ್ಯೆಗೈದಿರುವ ಸೇನೆ ʻಆಪರೇಷನ್‌ ಪಿಂಪಲ್‌ʼ ಕಾರ್ಯಾಚರಣೆಯನ್ನ ಮುಂದುವರಿಸಿದೆ. ನುಸುಳುಕೋರರ ಸುಳಿವು ಪತ್ತೆಹಚ್ಚಲು ಕುಪ್ವಾರದ ಕೆರಾನ್‌ ಪ್ರದೇಶದ ಸುತ್ತಮುತ್ತ ಶೂಧ ನಡೆಸುತ್ತಿದೆ.

ಇದೇ ನವೆಂಬರ್‌ 5ರಂದು ಕಿಶ್ತ್ವಾರ ಜಿಲ್ಲೆಯ ಚತ್ರೂ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇದಕ್ಕೂ ಮುನ್ನ ಅ.13ರಂದು ಕುಪ್ವಾರದಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆಗೈದಿದ್ದವು ಎನ್ನಲಾಗಿದೆ.