ಕೋಲ್ಕತ್ತಾ, ಮೇ 23: ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಜಾನುವಾರು ವಧೆ ನಿಷೇಧ ಪ್ರಮುಖ ನೀತಿಯಾಗಿ ಜಾರಿಯಾಗುತ್ತಿರುವ ನಡುವೆ, ಇದೀಗ ಪಶ್ಚಿಮ ಬಂಗಾಳದಲ್ಲೂ ಕಠಿಣ ನಿಯಮಗಳು ಜಾರಿಯಾಗಿವೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅಧಿಕಾರಕ್ಕೆ ಬಂದ ತಕ್ಷಣವೇ ಗೋ ಹತ್ಯೆ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ.
ಇತರೆ ಹಲವು ರಾಜ್ಯಗಳಲ್ಲಿ ಗೋ ಹತ್ಯೆ ನಿಷೇಧಕ್ಕೆ ಮುಸ್ಲಿಂ ಸಮುದಾಯಗಳಿಂದ ವಿರೋಧ ವ್ಯಕ್ತವಾಗಿದ್ದರೂ, ಪಶ್ಚಿಮ ಬಂಗಾಳದಲ್ಲಿ ಬಹುತೇಕ ಮುಸ್ಲಿಂ ಸಂಘಟನೆಗಳು ಸರ್ಕಾರದ ಕ್ರಮಕ್ಕೆ ಬೆಂಬಲ ನೀಡಿವೆ. ಬಕ್ರೀದ್ ಹಬ್ಬದ ಸಂದರ್ಭದಲ್ಲೂ ಜಾನುವಾರು ವಧೆ ಮಾಡುವುದಿಲ್ಲ ಎಂದು ಕೆಲವು ಸಂಘಟನೆಗಳು ಘೋಷಿಸಿವೆ. ಆದರೆ ಆಶ್ಚರ್ಯಕರ ಬೆಳವಣಿಗೆಯಾಗಿ, ಈ ನಿರ್ಧಾರಕ್ಕೆ ಈಗ ಹಿಂದೂ ರೈತರು ಮತ್ತು ಜಾನುವಾರು ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯ ಸರ್ಕಾರವು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜಾನುವಾರುಗಳ ವಧೆಗೆ ಸಂಪೂರ್ಣ ನಿಷೇಧ ಹೇರಿದ್ದು, 1950 ರ ಕಾನೂನು ಹಾಗೂ ಕಲ್ಕತ್ತಾ ಹೈಕೋರ್ಟ್ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ಬಕ್ರೀದ್ ಹಬ್ಬಕ್ಕೂ ಮುನ್ನ ಈ ಆದೇಶ ಜಾರಿಯಾಗಿರುವುದು ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದೆ.
ಮೇ 13 ರಂದು ಪ್ರಕಟವಾದ ಹೊಸ ಸರ್ಕಾರಿ ಅಧಿಸೂಚನೆಯ ಪ್ರಕಾರ, ಯಾವುದೇ ಹಸು, ಎತ್ತು ಅಥವಾ ಎಮ್ಮೆಯನ್ನು ವಧೆ ಮಾಡಲು ಮುನ್ನ ಅದು ವಧೆಗೆ ಯೋಗ್ಯವಾಗಿದೆ ಎಂಬುದನ್ನು ಪಶುವೈದ್ಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಜಂಟಿಯಾಗಿ ಪ್ರಮಾಣೀಕರಿಸಬೇಕು. ಜೊತೆಗೆ ಸರ್ಕಾರ ಮಾನ್ಯತೆ ನೀಡಿರುವ ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧೆಗೆ ಅವಕಾಶ ನೀಡಲಾಗಿದೆ.ಹಬ್ಬದ ಸಂದರ್ಭದಲ್ಲಿ ಈ ನಿಯಮವನ್ನು ಸಡಿಲಗೊಳಿಸುವಂತೆ ಸಲ್ಲಿಸಲಾದ ಅರ್ಜಿಗಳನ್ನು ಕಲ್ಕತ್ತಾ ಹೈಕೋರ್ಟ್ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಹಾಗೂ ನ್ಯಾಯಮೂರ್ತಿ ಪಾರ್ಥ ಸಾರಥಿ ಸೇನ್ ಅವರನ್ನೊಳಗೊಂಡ ಪೀಠ, ಸರ್ಕಾರದ ಕ್ರಮ ಕಾನೂನುಬದ್ಧವಾಗಿದೆ ಎಂದು ಹೇಳಿದೆ.ಈ ನಿಯಮದಿಂದ ಗ್ರಾಮೀಣ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ರೈತರು ಮತ್ತು ವ್ಯಾಪಾರಿಗಳು ಆರೋಪಿಸಿದ್ದಾರೆ. ಹಬ್ಬದ ಅವಧಿಯಲ್ಲಿ ಜಾನುವಾರು ಮಾರಾಟದಿಂದ ಹೆಚ್ಚಿನ ಆದಾಯ ಗಳಿಸುತ್ತಿದ್ದ ಹೈನುಗಾರರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರಸಿದ್ಧ ‘ಪೋಲೆರ್ಹತ್ ಗೋರು ಹಾತ್’ ಜಾನುವಾರು ಮಾರುಕಟ್ಟೆಯಲ್ಲಿ ಪ್ರತಿದಿನ ಸುಮಾರು 2,000 ಹಸುಗಳ ಮಾರಾಟ ನಡೆಯುತ್ತಿತ್ತು. ಆದರೆ ಈಗ ಹಬ್ಬದ ಸೀಸನ್ ನಲ್ಲಿಯೂ ಕೆಲವೇ ಜಾನುವಾರುಗಳು ಮಾತ್ರ ಕಾಣಿಸುತ್ತಿವೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.ಜಾನುವಾರು ವ್ಯಾಪಾರ, ಸಾಗಣೆ, ಚರ್ಮ ಉದ್ಯಮ ಮತ್ತು ಕಸಾಯಿಖಾನೆಗಳ ಮೇಲೆ ಅವಲಂಬಿತರಾಗಿರುವ ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ವಯಸ್ಸಾದ ಜಾನುವಾರುಗಳನ್ನು ಸಾಕುವುದು ರೈತರಿಗೆ ಹೆಚ್ಚುವರಿ ಹೊರೆ ಆಗುತ್ತಿರುವುದರಿಂದ, ಗ್ರಾಮೀಣ ಭಾಗಗಳಲ್ಲಿ ಸರ್ಕಾರದ ನಿಯಮಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಈದ್ ಅಲ್-ಅಧಾ (Bakrid ) ಸಮಯದಲ್ಲಿ ಜಾನುವಾರು ವಧೆಗೆ ನಿರ್ಬಂಧ ಹೇರಿರುವ ಸರ್ಕಾರದ ಅಧಿಸೂಚನೆ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ತಿರಸ್ಕರಿಸಿದ ಹೈಕೋರ್ಟ್, 2018 ರಲ್ಲಿಯೇ ನೀಡಿದ್ದ ನಿರ್ದೇಶನಗಳ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.


















