ಬೀದರ್ : ನಮ್ಮ ತಂದೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಸತತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಮನೆಯಲ್ಲೇ ಕೊನೆಯುಸಿರೆಳೆಯಬೇಕೆಂಬುದು ಅವರ ಆಸೆ, ಹೀಗಾಗಿ ಮನೆಗೆ ಶಿಫ್ಟ್ ಮಾಡಿದ್ದೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ಸ್ವಲ್ಪಮಟ್ಟಿಗೆ ಆರೋಗ್ಯ ಸ್ಥಿರವಾಗಿದೆ. ಬಿಪಿ ಮತ್ತು ಪಲ್ಸ್ ರೇಟ್ ಕಡಿಮೆಯಾಗಿ, ಸ್ಥಿತಿ ಗಂಭೀರವಾಗಿದೆ. ಆದರೆ ಮನೆಯಲ್ಲೇ ಕೊನೆಯುಸಿರೆಳೆಯಬೇಕು ಎಂಬುದು ನನ್ನಪ್ಪನ ಆಸೆ. ಹೀಗಾಗಿ ನಾವು ಅವರನ್ನು ಆಸ್ಪತ್ರೆಯಿಂದ ಮನೆಗೆ ಶಿಫ್ಟ್ ಮಾಡಿದ್ದೇವೆ. ಆಕ್ಸಿಜನ್ ಮೇಲೆ ವೈದ್ಯರು ಸತತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸಿಎಂ ಅವರು ಫೋನ್ ಮಾಡಿ, ತಂದೆಯವರ ಆರೋಗ್ಯ ವಿಚಾರಿಸಿದ್ದಾರೆ. ನಾನು ನಮ್ಮ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದೇನೆ. ಕಲಬುರಗಿಯಿಂದ ಬರುತ್ತಾರೋ ಇಲ್ಲವೋ ಗೊತ್ತಿಲ್ಲ, ನಮ್ಮ ತಂದೆ ಭೀಮಣ್ಣ ಖಂಡ್ರೆ, ಶಿಕ್ಷಣ, ಧಾರ್ಮಿಕ, ಸಹಕಾರ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ಶತಾಯುಷಿ, ಮಾಜಿ ಸಚಿವ ಭೀಮಣ್ಣ ಖಂಡ್ರೆ (102) ಅವರು ಕಳೆದ 15 ದಿನಗಳಿಂದ ಬೀದರ್‌ನ ಗುದಗೆ ಮಲ್ಟಿಸ್ಪೆಷಾಲಿಟಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಭಾನುವಾರ (ಜ.11) ಉಸಿರಾಟದ ಸಮಸ್ಯೆ ಮತ್ತು ಬಿಪಿಯಲ್ಲಿ ವ್ಯತ್ಯಾಸವಾಗಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಎಲ್ಲಾ ಅವರ ಬೆಂಬಲಿಗರು, ಹಿತೈಷಿಗಳು, ಸ್ವಾಮಿಗಳು ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಎಲ್ಲರೂ ನಮ್ಮ ತಂದೆ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದಿದ್ದಾರೆ.













