ಬೀದರ್ : ಜಿಲ್ಲಾಸ್ಪತ್ರೆ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಆಮ್ಲಜನಕ ಪೂರೈಕೆಗೆ ಅಡ್ಡಿಯಾಗಿ ಬುಧವಾರ ಸಮಸ್ಯೆ ಉಂಟಾಗಿದ್ದು, ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ತುರ್ತು ಕ್ರಮದಿಂದಾಗಿ 40 ನವಜಾತ ಶಿಶುಗಳ ಪ್ರಾಣ ಉಳಿದಿದೆ.
ಆಮ್ಲಜನಕ ಪೂರೈಕೆ ಸ್ಥಗಿತಗೊಂಡ ತಕ್ಷಣವೇ ಆಸ್ಪತ್ರೆ ಸಿಬ್ಬಂದಿ ಶಿಶುಗಳನ್ನು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಮೂಲಕ ಜೀವ ಉಳಿಸಿದ್ದಾರೆ.
ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಬ್ರಿಮ್ಸ್ ಕಟ್ಟಡದ ನೆಲಮಾಳಿಗೆಯಲ್ಲಿರುವ ಜನರೇಟರ್ ಕೋಣೆಗೆ ನೀರು ನುಗ್ಗಿತ್ತು. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮೂರನೇ ಮಹಡಿಗೆ ಮತ್ತು ಆರನೇ ಮಹಡಿಯಲ್ಲಿನ ಎನ್‌ಐಸಿಯು ಘಟಕಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಎಚ್ಚೆತ್ತ ಸಿಬ್ಬಂದಿ ನವಜಾತ ಶಿಶುಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದರು. ನರ್ಸಿಂಗ್ ಸಿಬ್ಬಂದಿ ಕೈ ಪಂಪ್ ಮೂಲಕ ಆಮ್ಲಜನಕ ಒದಗಿಸಿ ವೃದ್ಧೆಯೊಬ್ಬರ ಜೀವ ಉಳಿಸಿದ್ದಾರೆ.
ಬ್ರಿಮ್ಸ್ನ ಎನ್‌ಐಸಿಯು ಘಟಕದಲ್ಲಿ 40 ಶಿಶುಗಳಿದ್ದವು. ಆಮ್ಲಜನಕ ಪೂರೈಕೆ ಸ್ಥಗಿತಗೊಂಡ ನಂತರ ಎಲ್ಲಾ 40 ನವಜಾತ ಶಿಶುಗಳನ್ನು ಬೇರೆ ಆಸ್ಪತ್ರೆಗಳಿಗೆ ರವಾನಿಸಲಾಯಿತು. ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿಗಳ ಸಹಾಯದಿಂದ ಜನರೇಟರ್ ಕೊಠಡಿಯಿಂದ ನೀರನ್ನು ಹೊರಹಾಕಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಹೇಶ ಬಿರಾದಾರ್ ತಿಳಿಸಿದ್ದಾರೆ.
ಬೀದರ್ನಲ್ಲಿ ಧಾರಾಕಾರ ಮಳೆ
ಬೀದರ್ ಜಿಲ್ಲೆಯಲ್ಲಿ ಕಳೆದ ಮೂರು ದಿನದಿಂದ ಧಾರಕಾರವಾಗಿ ಮಳೆಯಾಗುತ್ತಿದ್ದು ಜನ ಮನೆಯಿಂದ ಹೊರಬಾದಂತಾ ಸ್ಥಿತಿಯುಂಟಾಗಿದೆ. ಬೀದರ್ ಚಿಟ್ಟಾ ಮುಖ್ಯರಸ್ತೆಯ ಮೇಲೆ ಹಳ್ಳದ ನೀರು ಹರಿಯುತ್ತಿದ್ದು ಅದರಲ್ಲಿಯೇ ಜನರು ಜೀವದ ಹಂಗುತೊರೆದು ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾರೆ.
ನಿರಂತರ ಮಳೆಯಿಂದಾಗಿ ಸೋಯಾ, ಉದ್ದು, ತೊಗರಿ ಬೆಳೆ ನಾಶವಾಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ಹಣ ನಷ್ಟವಾಗಿದೆ.