ನವದೆಹಲಿ: ಸಂಸತ್ ಬಜೆಟ್ ಅಧಿವೇಶನ ಇಂದು ಆರಂಭವಾಗಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರದಂದು ಸತತ 7ನೇ ಬಾರಿಗೆ ಆಯವ್ಯಯ ಮಂಡಿಸಲಿದ್ದಾರೆ.
ಈ ಬಜೆಟ್ ಮಂಡನೆ ಮೂಲಕ ಅವರು ಹೊಸ ದಾಖಲೆ ಬರೆಯಲಿದ್ದಾರೆ. ಹಣಕಾಸು ಸಚಿವರಾಗಿ ಸತತ 6 ಬಜೆಟ್ ಮಂಡಿಸಿದ್ದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಸಾಧನೆಯನ್ನ ನಿರ್ಮಲಾ ಸೀತಾರಾಮನ್ ಹಿಂದಿಕ್ಕಲಿದ್ದಾರೆ.
ಬಜೆಟ್ ಮಂಡನೆಗೂ ಮುನ್ನ ದಿನವಾದ ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಮಧ್ಯಮವರ್ಗ ಈ ಬಜೆಟ್ ಮೇಲೆ ಭಾರೀ ನಿರೀಕ್ಷೆಗಳನ್ನೇ ಇಟ್ಟುಕೊಂಡಿದೆ.
ನಿರೀಕ್ಷೆಗಳು
ರಸಗೊಬ್ಬರ, ಕೃಷಿ ರಾಸಾಯನಿಕಗಳ ಮೇಲೆ ಸಹಾಯಧನ ನೀಡುವ ಸಾಧ್ಯತೆ ಇದೆ. ಜತೆಗೆ ಉದ್ಯೋಗ ಖಾತ್ರಿಯಡಿ ದಿನಗೂಲಿ ಹೆಚ್ಚಿಸುವ ನಿರೀಕ್ಷೆ ಇದೆ. ಅಲ್ಲದೇ, ಕೃಷಿ ಸಮ್ಮಾನ್ ಯೋಜನೆಯ ಸಹಾಯಧನ ಹೆಚ್ಚಿಸುವ ನಿರೀಕ್ಷೆಯೂ ಇದೆ. ಜೊತೆಗೆ ವೇತನದಾರರಿಗೆ ಇನ್ಕಂ ಟ್ಯಾಕ್ಸ್ ರಚನೆಯಲ್ಲಿ ಬದಲಾವಣೆ ಹಾಗೂ ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರುವ ನಿರೀಕ್ಷೆ ಇದೆ. ವೈಯಕ್ತಿಕ ಆದಾಯ ತೆರಿಗೆ ಮಿತಿ ಹೆಚ್ಚಿಸುವ ಸಾಧ್ಯತೆ. ಸತತವಾಗಿ ಏರುತ್ತಿರುವ ಬೆಲೆ ನಿಯಂತ್ರಣ ಮಾಡೋ ನಿರೀಕ್ಷೆ ಹಾಗೂ ಅಸಂಘಟಿತ ಕಾರ್ಮಿಕರನ್ನ ESIC ವ್ಯಾಪ್ತಿಗೆ ಸೇರಿಸಬಹುದು.
ಬಜೆಟ್ ಅಧಿವೇಶನದಲ್ಲಿ ಮೋದಿ ಸರ್ಕಾರವನ್ನ ಕಟ್ಟಿಹಾಕಲು ಇಂಡಿಯಾ ಕೂಟ ಸಿದ್ಧವಾಗಿದೆ. ನೀಟ್ ಪರೀಕ್ಷೆ ಅಕ್ರಮ, ಕನ್ವರ್ ಯಾತ್ರೆ, ಇಡಿ, ಸಿಬಿಐ ದುರ್ಬಳಕೆ, ಹೀಗೆ ದೊಡ್ಡ ಪಟ್ಟಿಯನ್ನೇ ರೆಡಿ ಮಾಡಿಕೊಂಡಿವೆ. ಇದರ ಮಧ್ಯೆ ಮಿತ್ರಪಕ್ಷಗಳೇ ಪ್ರಧಾನಿ ಮೋದಿಗೆ ದೊಡ್ಡ ತಲೆನೋವಾಗಿವೆ. ಬಿಹಾರ ಹಾಗೂ ಆಂಧ್ರಕ್ಕೆ ಬಜೆಟ್ನಲ್ಲಿ ವಿಶೇಷ ಅನುದಾನ ಘೋಷಿಸುವಂತೆ ಸರ್ವಪಕ್ಷಗಳ ಸಭೆಯಲ್ಲೇ ಜೆಡಿಯು ಮತ್ತು ಟಿಡಿಪಿ ಒತ್ತಾಯಿಸಿವೆ.














