ಮನೆ ಕಾನೂನು ಒಆರ್ ಒಪಿ ಬಾಕಿ ಪಾವತಿ: ರಕ್ಷಣಾ ಸಚಿವಾಲಯ ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ ಎಂದ ಸುಪ್ರೀಂ ಕೋರ್ಟ್

ಒಆರ್ ಒಪಿ ಬಾಕಿ ಪಾವತಿ: ರಕ್ಷಣಾ ಸಚಿವಾಲಯ ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ ಎಂದ ಸುಪ್ರೀಂ ಕೋರ್ಟ್

0

ಒಂದು ಶ್ರೇಣಿ ಒಂದು ಪಿಂಚಣಿ (ಒಆರ್ಒಪಿ) ಯೋಜನೆಯಡಿ ಬಾಕಿ ಪಾವತಿಗೆ ಮುಂದಿನ ವಾರದೊಳಗೆ ಮಾರ್ಗಸೂಚಿ ರೂಪಿಸುವಂತೆ ರಕ್ಷಣಾ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.

ಬಾಕಿ ಪಿಂಚಣಿ ಪಾವತಿಗೆ ಗಡುವು ವಿಸ್ತರಿಸಿ ಜನವರಿಯಲ್ಲಿ ರಕ್ಷಣಾ ಸಚಿವಾಲಯ ಹೊರಡಿಸಿದ್ದ ಆದೇಶ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ನಿರ್ದೇಶನಗಳ ಉಲ್ಲಂಘನೆಯಾಗಿರುವುದರಿಂದ ಅದನ್ನು ಹಿಂತೆಗೆದುಕೊಳ್ಳಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ರಕ್ಷಣಾ ಸಚಿವಾಲಯದ ಕಾರ್ಯದರ್ಶಿಯನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ  ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ತ್ರಿಸದಸ್ಯ ಪೀಠ ಕೇಳಿತು.

“ಅಟಾರ್ನಿ ಜನರಲ್ ಅವರೇ, ದಯವಿಟ್ಟು ರಕ್ಷಣಾ ಸಚಿವಾಲಯ ಕಾನೂನು ಕೈಗೆತ್ತಿಕೊಳ್ಳದಂತೆ ನೋಡಿಕೊಳ್ಳಿ” ಎಂದು ಸಿಜೆಐ ಎಚ್ಚರಿಸಿದರು. ಸೇನೆಯ ನಿವೃತ್ತ ಸಿಬ್ಬಂದಿ ಪಿಂಚಣಿಯ ಮೊತ್ತ ಪಡೆಯಲಿ ಎಂಬುದು ಮಾತ್ರ ತನ್ನ ಕಾಳಜಿ ಎಂದು ಪೀಠ ಹೇಳಿತು.

“ಸೋಮವಾರದ ಟಿಪ್ಪಣಿಯನ್ನು ನಮಗೆ ತೋರಿಸಿ. ಎಷ್ಟು ಉಳಿದಿದೆ? (ಪಿಂಚಣಿ ನೀಡಲು) ಆದ್ಯತೆಯನ್ನು ಹೇಗೆ ನಿರ್ಧರಿಸಲಾಗಿದೆ? 75 ವರ್ಷಕ್ಕಿಂತ ವಯೋವೃದ್ಧರು, ವಿಧವೆಯರು ಮತ್ತಿರರನ್ನು ಗಣನೆಗೆ ತೆಗೆದುಕೊಳ್ಳುವುದು, ಮುಂತಾದ ವಿಚಾರಗಳ ಬಗ್ಗೆ ತಿಳಿಸಿ” ಎಂದು ನ್ಯಾಯಾಲಯ ಸಲಹೆ ನೀಡಿತು. 

ಕಳೆದ ಫೆಬ್ರವರಿ 27ರಂದು ನಡೆದ ವಿಚಾರಣೆ ವೇಳೆ ʼಒಆರ್ ಒಪಿ ಅಡಿಯಲ್ಲಿ ನಿವೃತ್ತ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಬಾಕಿ ಪಾವತಿಸಲು ಏಕಪಕ್ಷೀಯವಾಗಿ ಗಡುವು ವಿಸ್ತರಿಸುವ ಸಚಿವಾಲಯದ ನಿರ್ಧಾರಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತ್ತು. ಈ ವರ್ಷ ಜನವರಿಯಲ್ಲಿ, ಸಚಿವಾಲಯವು ನಾಲ್ಕು ಸಮಾನ ಕಂತುಗಳ ಮೂಲಕ ಬಾಕಿ ಪಾವತಿಗಳನ್ನು ಮಾಡಲಾಗುವುದು ಎಂದು ತಿಳಿಸಿತ್ತು. ಆಗ ಮಾರ್ಚ್ ಮಧ್ಯದ ವೇಳೆಗೆ ಪಾವತಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಅಲ್ಲದೆ ಸಚಿವಾಲಯ ಈ ರೀತಿಯ ನಿರ್ದೇಶನ ಏಕೆ ನೀಡಿದೆ ಎಂಬುದನ್ನು ವಿವರಿಸಿ ವೈಯಕ್ತಿಕ ಅಫಿಡವಿಟ್ ಸಲ್ಲಿಸುವಂತೆ ಕಾರ್ಯದರ್ಶಿಗೆ ಪೀಠ ಸೂಚಿಸಿತ್ತು.

ಕೇಂದ್ರ ಸರ್ಕಾರ ನವೆಂಬರ್ 7, 2015ರಲ್ಲಿ ಅಧಿಸೂಚನೆ ಹೊರಡಿಸುವ ಮೂಲಕ ಜಾರಿಗೊಳಿಸಿದ ಒಆರ್ ಒಪಿ ಯೋಜನೆಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 2022ರಲ್ಲಿ ಎತ್ತಿ ಹಿಡಿದ ತೀರ್ಪಿನಿಂದಾಗಿ ಈ ಪ್ರಕರಣ ತಲೆದೋರಿತ್ತು.

ಹಿಂದಿನ ಲೇಖನಹಾಸ್ಯ
ಮುಂದಿನ ಲೇಖನಮಕ್ಕಳನ್ನು ಜಂತುಹುಳು ಮುಕ್ತರನ್ನಾಗಿ ಮಾಡಲು ಸಹಕರಿಸಿ: ಡಾ. ಕೆ.ಎಚ್.ಪ್ರಸಾದ್