ಮನೆ ರಾಷ್ಟ್ರೀಯ ʻಪಿಎಂ ಕೇರ್ಸ್ ಫಾರ್ ಚಿಲ್ಡ್ರನ್  ಯೋಜನೆʼಗೆ ಪ್ರಧಾನಿ ಮೋದಿ ಚಾಲನೆ

ʻಪಿಎಂ ಕೇರ್ಸ್ ಫಾರ್ ಚಿಲ್ಡ್ರನ್  ಯೋಜನೆʼಗೆ ಪ್ರಧಾನಿ ಮೋದಿ ಚಾಲನೆ

0

ನವದೆಹಲಿ (New Delhi)- ಕೊರೊನಾದಿಂದ ಪೋಷಕರನ್ನ ಕಳೆದುಕೊಂಡ ಮಕ್ಕಳಿಗೆ ನೆರವಾಗಲೆಂದು ʻಪಿಎಂ ಕೇರ್ಸ್ ಫಾರ್ ಚಿಲ್ಡ್ರನ್  ಯೋಜನೆʼಯನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದರು.

ಕೊರೊನಾದಿಂದ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡ ಜನರಿಗೆ ಪರಿಸ್ಥಿತಿ ಎಷ್ಟು ಕಷ್ಟಕರವಾಗಿದೆ ಎಂದು ನನಗೆ ತಿಳಿದಿದೆ. ಕೊರೊನಾ ಸಮಯದಲ್ಲಿ ತಮ್ಮ ಪೋಷಕರನ್ನ ಕಳೆದುಕೊಂಡ ಮಕ್ಕಳಿಗಾಗಿ ಈ ಕಾರ್ಯಕ್ರಮ ಜಾರಿ ಮಾಡಲಾಗುತ್ತಿದೆ. ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ ಅಂತಹ ಮಕ್ಕಳಿಗೆ ಸಹಾಯ ಮಾಡುವ ಪ್ರಯತ್ನವಾಗಿದೆ ಎಂದು ಹೇಳಿದರು.

ವೃತ್ತಿಪರ ಕೋರ್ಸ್‌ ಮತ್ತು ಉನ್ನತ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲದ ಅಗತ್ಯವಿರುವವರಿಗೆ ಪಿಎಂ-ಕೇರ್ಸ್ ನೆರವಾಗಲಿದೆ. ಪಿಎಂ ಕೇರ್ಸ್ ಯೋಜನೆಯಡಿ ಕೊರೊನಾನಿಂದ ಅನಾಥರಾದ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಆರೋಗ್ಯ ಕಾರ್ಡ್‌ನ ಪಾಸ್‌ಬುಕ್ ಬಿಡುಗಡೆಯ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಈ ಕುರಿತು ಪ್ರಧಾನಿ ಮಾತನಾಡಿದರು.

ಅಲ್ಲದೆ, ಮಕ್ಕಳಿಗೆ ಪ್ರತಿ ತಿಂಗಳು 4 ಸಾವಿರ ರೂ. ನೀಡಲಿದ್ದು, ಇದು ಅವರ ದೈನಂದಿನ ಅಗತ್ಯಗಳಿಗೆ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ. 23 ವರ್ಷ ತುಂಬಿದ ನಂತರದವರಿಗೆ 10 ಲಕ್ಷ ರೂ. ಜೊತೆಗೆ, ಆಯುಷ್ಮಾನ್ ಕಾರ್ಡ್ ಮೂಲಕ ಆರೋಗ್ಯ ವಿಮೆ ಮತ್ತು ಮಾನಸಿಕ ಹಾಗೂ ಭಾವನಾತ್ಮಕ ಸಹಾಯಕ್ಕಾಗಿ ‘ಸಂವಾದ್ ಸಹಾಯವಾಣಿ’ ಕೌನ್ಸೆಲಿಂಗ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಕೋವಿಡ್‌ನಿಂದ ಅನಾಥರಾಗಿರುವ ಮಕ್ಕಳಿಗಾಗಿ ಪಿಎಂ ಕೇರ್ಸ್ ಸಹಾಯ ಮಾಡಲಿದೆ’ ಎಂದು ಹೇಳಿದರು.

ಈ ಯೋಜನೆಗೆ ಅರ್ಹ ಮಕ್ಕಳನ್ನು ನೋಂದಾಯಿಸಲು ಸರ್ಕಾರವು ಆನ್‌ಲೈನ್ ಪೋರ್ಟಲ್ ನ್ನು ಪ್ರಾರಂಭಿಸಿದೆ. ಪೋರ್ಟಲ್ ಏಕ-ಗವಾಕ್ಷಿ ವ್ಯವಸ್ಥೆಯಾಗಿದ್ದು, ಇದು ಮಕ್ಕಳ ಅನುಮೋದನೆ ಪ್ರಕ್ರಿಯೆ ಮತ್ತು ಎಲ್ಲಾ ಇತರ ಸಹಾಯವನ್ನು ಸುಗಮಗೊಳಿಸುತ್ತದೆ.

ಪಿಎಂ ಕೇರ್ಸ್‌ ನಿಧಿಯಿಂದಾಗಿ ಕೊರೊನಾ ಅವಧಿಯಲ್ಲಿ ಆಸ್ಪತ್ರೆಗಳನ್ನು ಸಜ್ಜುಗೊಳಿಸಲು, ವೆಂಟಿಲೇಟರ್ ಖರೀದಿಸಲು ಮತ್ತು ಆಮ್ಲಜನಕ ಘಟಕಗಳನ್ನು ಸ್ಥಾಪಿಸಲು ಸಹಾಯಕವಾಯಿತು. ಇದರಿಂದ ಅನೇಕ ಜೀವಗಳನ್ನು ಉಳಿಸಲು ಸಾಧ್ಯವಾಯಿತು ಎಂದರು.

2014ಕ್ಕೂ ಮುನ್ನ ಇದ್ದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಭಯೋತ್ಪಾದನಾ ಸಂಘಟನೆಗಳ ವ್ಯಾಪಕ ಹರಡುವಿಕೆ, ಪ್ರಾದೇಶಿಕ ತಾರತಮ್ಯದಂಥಹ ವಿಷವರ್ತುಲದಿಂದ ಇಂದು ದೇಶವು ಹೊರಬರುತ್ತಿದೆ. ನಮ್ಮ ಸರ್ಕಾರದ ಎಂಟು ವರ್ಷಗಳ ಅವಧಿಯನ್ನು ಬಡವರ ಕಲ್ಯಾಣಕ್ಕಾಗಿಯೇ ಮೀಸಲಿಡಲಾಗಿದೆ ಎಂದು ಹೇಳಿದರು.

ನಮ್ಮ ಸರ್ಕಾರ 8 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ದೇಶದ ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯವು ಅಭೂತಪೂರ್ವವಾಗಿದೆ. ಹೊಸ ಭರವಸೆ ಮತ್ತು ನಂಬಿಕೆಯಿಂದ ಜಗತ್ತು ನಮ್ಮತ್ತ ನೋಡುತ್ತಿದೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.