ನವದೆಹಲಿ (New Delhi): ಪ್ರಧಾನಿ ನರೇಂದ್ರ ಮೋದಿ ಅವರು ಜಿ–7 ರಾಷ್ಟ್ರಗಳ ಶೃಂಗ ಸಭೆಯಲ್ಲಿ ಭಾಗವಹಿಸಲು ಜರ್ಮನಿ ಪ್ರವಾಸ ಕೈಗೊಂಡಿದ್ದಾರೆ.
ಜೂನ್ 26 ಮತ್ತು 27ರಂದು ಜರ್ಮನಿ ಪ್ರವಾಸ ಕೈಗೊಳ್ಳಲಿದ್ದು, ಜೂನ್ 28ರಂದು ಯುಎಇಗೆ ಪ್ರಯಾಣಿಸಲಿದ್ದು, ಗಲ್ಫ್ ದೇಶದ ಮಾಜಿ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಯಾದ್ ಅಲ್ ನಹ್ಯಾನ್ ಅವರ ಸಾವಿಗೆ ಸಂತಾಪ ಸೂಚಿಸಲಿದ್ದಾರೆ.
ಜರ್ಮನಿ ಮತ್ತು ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು 12ಕ್ಕೂ ಹೆಚ್ಚು ವಿಶ್ವ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ಅಲ್ಲದೆ, 15ಕ್ಕೂ ಹೆಚ್ಚು ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜರ್ಮನಿಯ ಮುನ್‌ಶೆನ್ ನಗರದಲ್ಲಿ ಅನಿವಾಸಿ ಭಾರತೀಯರು ಏರ್ಪಡಿಸಿರುವ ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದು ಕೋವಿಡ್ ಅಂತ್ಯದ ಬಳಿಕ ಅತಿದೊಡ್ಡ ಕಾರ್ಯಕ್ರಮವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.
ಈ ಎರಡೂ ದೇಶಗಳ 60 ಗಂಟೆಗಳ ಪ್ರವಾಸದ ವೇಳೆ ಮೋದಿ ಅವರು ಜಿ-7 ಸದಸ್ಯ ರಾಷ್ಟ್ರಗಳ ಜೊತೆಗಷ್ಟೇ ಅಲ್ಲದೆ, ಇತರ ದೇಶಗಳ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.