ಅ+ವಿಭಕ್ತ ಕುಟುಂಬ
ಸಂತೆಯಿಂದ ಅಜ್ಜ ತರುತ್ತಿದ್ದ ಕಡ್ಲೇಪುರಿಯ ನೆನಪು ಆಗಾಗ ಕಾಡುತ್ತದೆ!
ಎರಡ್ಮೂರು ಲೀಟರ್ ಪುರಿ, ನೂರೈವತ್ತು ಗ್ರಾಂ ಕಾರ ಇದ್ದರೆ ಹೆಚ್ಚು ಅದರಲ್ಲಿ
ತಾತ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಮಕ್ಕಳಿಂದ ಕೂಡಿದ ಅವಿಭಕ್ತ ಕುಟುಂಬ
ಎಲ್ಲರೂ ಕಾಯುತ್ತಿದ್ದೆವು ಅಜ್ಜಿ ಅಳೆದು ತೂಗಿ ನೀಡುವ ಬೊಗಸೆ ಪುರಿಗಾಗಿ.
ಆವಾಗಲೇ ಅನಿಸಿದ್ದು, ಕಾಯುವುದರಲ್ಲು ಸುಖವಿದೆ ಎಂದೂ
ಅಪ್ಪ, ಚಿಕ್ಕಪ್ಪನ ದನಿ ಹೆಂಚಿನ ಆಚೆ ಬರುತ್ತಿರಲಿಲ್ಲ
ಎರಡ್ಮೂರು ಜಡೆ ಒಂದೆಡೇ ಇದ್ದರು ಸದ್ದಿಲ್ಲ
ಅಯ್ಯನೆಂಬ ಮಾಂತ್ರಿಕನಿಂದ.
ಅಯ್ಯನಿಗೆ ವಯಸ್ಸಾದಂತೆ, ಅಪ್ಪ, ಚಿಕ್ಕಪ್ಪಂದಿರಿಗೂ
ಒಂದೆಡೆ ಶಕ್ತಿ ಹೆಚ್ಚಾದರೆ ಮತ್ತೊಂದೆಡೆ ಶಕ್ತಿಯ ಕುಸಿತ
ಕಾಲ ಎಷ್ಟು ನಿಷ್ಠೂರ ಅಲ್ಲವಾ?
ದಿನಕಳೆದಂತೆ ಮಕ್ಕಳ ದನಿ ಹಂಚು ದಾಟಿ ಬೀದಿಗೆ ಚಾಚಿದವು
ಜೊತೆಯಾಗಿ ತಿನ್ನುತ್ತಿದ್ದವರು ಕೈಗೆ ಕೈ ಮೀಲಾಯಿಸುವಂತ್ತಾದರು
ಅಜ್ಜನ ನಂಬಿಕೆ ಚೂರಾಗಿ ಕುಸಿಯುವಂತ್ತಾಯಿತು
ಅಜ್ಜಿಯ ಕಣ್ಣು ಸರಿಯಾಗಿ ಕಾಣದಿದ್ದರೂ ಒಮ್ಮೆ ಹಿರಿಯನ
ಮತ್ತೊಮ್ಮೆ ಕಿರಿಯನ ಕೈ ಹಿಡಿದು, ಕೈ ಮುಗಿದು ಸಮಾಧಾನಿಸುತ್ತಿದ್ದಳು
ಕುಟುಂಬದ ಗುಟ್ಟು ರಟ್ಟಾದೀತು ಎಂಬ ಭಯ ಅವಳಿಗೆ ಕಾಡುತಿತ್ತು
ಬೀದಿಗೆ ಬಂದ ಸಂಬಂಧವು ಕವಲಾಗದೆ ಉಳಿದಿತೆ?
ಸೈಕಲ್, ಹಾರೆ, ಗುದ್ದಲಿ… ಎಲ್ಲವೂ ದೇವಸ್ಥಾನದ ಜಗುಲಿಯಲ್ಲಿ ಬೇರಾದವು
ಇದು ಸಂಬಂಧಗಳ ಕೊನೆಯೋ, ಹೊಸ ಬದುಕಿನ ಆರಂಭವೋ
ಈ ರೀತಿಯ ಪ್ರಶ್ನೆಯೊಂದು ಅಲ್ಲಿ ಅನಾಥವಾಗಿತ್ತು
ನೆನ್ನೆ ಚಿಕ್ಕಪ್ಪ, ಚಿಕ್ಕಮ್ಮ ಇಂದು ಎದುರಾಳಿ ಮಕ್ಕಳು ಅಷ್ಟೇ
ಅಜ್ಜನದೋ ಎಲ್ಲರೂ ನನ್ನ ಪಾಲಿಗೆ ಸತ್ತು ಹೋದಿರಿ ಎಂಬ ನಿಲುವು
ಅಜ್ಜಿಗೆ ಯಾರನ್ನು ಕಳೆದುಕೊಳ್ಳಲಾಗದ ಸಂಕಟ
ಅಜ್ಜನ ಸಂತೆ ಕಡ್ಲೇಪುರಿ ಚೀಲ ಇಂದು ಅಪ್ಪನ ಹೆಗಲಿನಲ್ಲಿ
ಪ್ರಮಾಣ ಅಷ್ಟೇ ಇದ್ದರೂ, ತಿನ್ನುವವರ ಸಂಖ್ಯೆ, ಹಂಚಿ ತಿನ್ನುವ ಪ್ರೀತಿ ಮರೆಯಾಗಿತ್ತು…
- ರವಿ ಡಿ.ಗಾಯನಹಳ್ಳಿ