ಮನೆ ರಾಜ್ಯ ಪ್ರವೀಣ್‌ ನೆಟ್ಟಾರು ಹತ್ಯೆ: ಪುತ್ತೂರು ಸಂಪೂರ್ಣ ಬಂದ್‌

ಪ್ರವೀಣ್‌ ನೆಟ್ಟಾರು ಹತ್ಯೆ: ಪುತ್ತೂರು ಸಂಪೂರ್ಣ ಬಂದ್‌

0

ಪುತ್ತೂರು (Puttur): ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಬಂದ್ ಕರೆಗೆ ಪುತ್ತೂರು ನಗರದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು ಅಂಗಡಿಗಳು ಸಂಪೂರ್ಣ ಬಂದ್ ಆದ ಕಾರಣ ನಗರದಲ್ಲಿ ಜನಜೀವನ ಸ್ತಬ್ಧಗೊಂಡಿದೆ.‌

ಪುತ್ತೂರು ನಗರದಲ್ಲಿ ಮೆಡಿಕಲ್ ಶಾಪ್‌, ಆಸ್ಪತ್ರೆ, ಹಾಲು ಮಾರಾಟದ ಅಂಗಡಿ ಮತ್ತು ಕೆಲವು ತರಕಾರಿ ಅಂಗಡಿ ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳು ಬಂದ್ ಆಗಿದ್ದವು. ಎಲ್ಲ ಸಮುದಾಯದವರು ವ್ಯಾಪಾರ ಮಳಿಗೆಗಳನ್ನು ಬಂದ್ ಮಾಡಿದ್ದರು. ನಗರದಲ್ಲಿ ಜನರ ಓಡಾಟ ವಿರಳವಾಗಿತ್ತು. ಗ್ರಾಮೀಣ ಭಾಗಗಳಿಂದ ನಗರಕ್ಕೆ ಬರುವ ಜನರ ಸಂಖ್ಯೆ ಕಡಿಮೆಯಾಗಿತ್ತು.

ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ಗೆ ನಗರದ ಬೊಳುವಾರು ಸಮೀಪ ಕಲ್ಲೆಸೆದು ಎದುರು ಭಾಗದ ಗಾಜು ಪುಡಿ ಮಾಡಿದ ಕಾರಣ ಕೆಲಕಾಲ ಬಸ್ ಸಂಚಾರ ಸ್ಥಗಿತಗೊಳಿಸಲಾಯಿತು. ಖಾಸಗಿ ಬಸ್ ಹಾಗೂ ಟೂರಿಸ್ಟ್ ವಾಹನಗಳ ಸಂಚಾರವೂ ಇರಲಿಲ್ಲ. ನಗರದಲ್ಲಿ ಕೆಲವೇ ಆಟೋಗಳ ಓಡಾಟ ಮಾತ್ರ ಕಂಡು ಬರುತ್ತಿತ್ತು. ಪುತ್ತೂರಿನ ವಿವೇಕಾನಂದ ಸಮೂಹ ವಿದ್ಯಾಸಂಸ್ಥೆಗಳು, ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಲಾಗಿತ್ತು. ಉಳಿದ ವಿದ್ಯಾಸಂಸ್ಥೆಗಳಲ್ಲಿ ಬಂದ ಮನೆಗೆ ತೆರಳಲು ಇಚ್ಛಿಸಿದವರಿಗೆ ಅವಕಾಶ ಮಾಡಿಕೊಡಲಾಗಿತ್ತು.

ಗ್ರಾಮೀಣ ಪ್ರದೇಶದ ಈಶ್ವರಮಂಗಲ ಪೇಟೆ ಸಂಪೂರ್ಣ ಬಂದ್ ಆಗಿತ್ತು. ಮೆಡಿಕಲ್, ಹಾಲು ಮಾರಾಟ ಅಂಗಡಿ, ರಾಷ್ಟ್ರೀಕೃತ ಬ್ಯಾಂಕ್ ಹೊರತುಪಡಿಸಿ ಉಳಿದೆ ಮಳಿಗೆಗಳು ಬಂದ್ ಆಗಿದ್ದವು. ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಪೇಟೆಯಲ್ಲಿ ಜನಸಂಚಾರ ವಿರಳವಾಗಿತ್ತು.

ಬೆಟ್ಟಂಪಾಡಿ ಮತ್ತು ಪಾಣಾಜೆ ಪೇಟೆಯ ಬಹತೇಕ ಅಂಗಡಿಗಳು ಬಂದ್ ಆಗಿದ್ದವು. ರೆಂಜ, ಶ್ರೀರಾಮನಗರ, ರೆಂಜ ಸರ್ಕಲ್‌ನಲ್ಲಿರುವ ಅಂಗಡಿಗಳು ಮುಚ್ಚಿದ್ದವು. ರೆಂಜ ಮೇಲಿನ ಪೇಟೆಯಲ್ಲಿ ಹಿಂದೂ ಸಮುದಾಯದವರು ಅಂಗಡಿಗಳನ್ನು ಮುಚ್ಚಿದ್ದರು. ಕುಂಬ್ರ, ಸಂಪ್ಯ, ಮಾಡಾವು, ತಿಂಗಳಾಡಿ, ಕಾವು ಪೇಟೆಗಳಲ್ಲಿ ಹಿಂದೂ ಸಮುದಾಯದ ವರ್ತಕರು ಅಂಗಡಿ ಬಂದ್ ಮಾಡಿದ್ದರು.

ಪುತ್ತೂರು ಉಪವಿಭಾಗ ವ್ಯಾಪ್ತಿಯ ಪುತ್ತೂರು, ಸುಳ್ಯ, ಕಡಬ ತಾಲ್ಲೂಕು ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುರುವಾರ ಮಧ್ಯರಾತ್ರಿ 12 ಗಂಟೆಯ ತನಕ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಹಿಂದಿನ ಲೇಖನಹಿಮೋಗ್ಲೋಬಿನ್‌ ಹೆಚ್ಚಳಕ್ಕೆ ಈ ಆಹಾರಗಳು ಬೆಸ್ಟ್‌
ಮುಂದಿನ ಲೇಖನಜುಲೈ 29 ರಂದು ಒಟಿಟಿಯಲ್ಲಿ ʻಚಾರ್ಲಿʼಸಿನಿಮಾ ಬಿಡುಗಡೆ