ಕೆ.ಆರ್.ಪೇಟೆ: ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಬಾಲಕರಿಬ್ಬರಿಗೆ ವಧು ವರರಂತೆ ಸಿಂಗರಿಸಿ ವಿಚಿತ್ರ ಮದುವೆ ನಡೆಸಿದ ಪ್ರಸಂಗ ತಾಲೂಕಿನ ಕಸಬಾ ಹೋಬಳಿಯ ಹುರುಳಿಗಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನಾದ್ಯಂತ ಅಲ್ಪ ಸಲ್ವ ಮಳೆಯಾಗುತ್ತಿದ್ದರೂ ಕೆರೆ ಕಟ್ಟೆಗಳು ತುಂಬುವಂತೆ ಇದುವರೆಗೂ ಮಳೆಯಾಗಿಲ್ಲ.ಗಂಡುಗಳಿಗೆ ಮದುವೆ ಮಾಡಿದರೆ ಸಂಮೃದ್ದವಾಗಿ ಮಳೆಯಾಗಿ ಜನ ಜಾನುವಾರುಗಳಿಗೆ ಒಳಿತಾಗುತ್ತದೆನ್ನುವುದು ಜನಪದ ನಂಬಿಕೆ.ಹಿರಿಯ ನಂಬಿಕೆಯ ಆಧಾರದ ಮೇಲೆ ಉತ್ತಮ ಮಳೆಯಾಗಿ ಸಂವೃದ್ದಿಯ ಬೆಳೆ ಬರಲಿ ಎನ್ನುವ ಸದುದ್ದೇಶದಿಂದ ಗ್ರಾಮಸ್ಥರು ಒಗ್ಗೂಡಿ ಒಬ್ಬರು ಬಾಲಕರಿಗೆ ಹೆಣ್ಣು- ಗಂಡುಗಳಂತೆ ಅಲಂಕರಿಸಿ ಮದುವೆ ಮಾಡಿದರು.
ಸಾಂಪ್ರದಾಯಿಕ ರೀತಿಯಲ್ಲಿ ಬಾಲಕರಿಬ್ಬರನ್ನು ಹೆಣ್ಣು ಗಂಡುಗಳಂತೆ ಹೊಸ ವಸ್ತ್ರಗಳೊಂದಿಗೆ ಪೇಟೆ,ಬಾಸಿಂಗ ಹಾಕಿ ಸಿಂಗರಿಸಿದ ಗ್ರಾಮಸ್ಥರು ಪಟಾಕಿ,ಮಂಗಳ ವಾದ್ಯಗಳನ್ನು ನುಡಿಸುತ್ತಾ ಮಧು ಮರರನ್ನು ಮೆರವಣಿಗೆ ಮಾಡಿದರಲ್ಲದೆ ಮದುವೆ ಊಟವನ್ನು ಮಾಡಿದರು.ಗ್ರಾಮದ ಸರ್ವ ಜನಾಂಗಗಳೂ ವಿವಾಹ ಕಾರ್ಯದಲ್ಲಿ ಪಾಲ್ಗೊಂಡಿದ್ದ ಕಾರಣ ಸಮಸ್ತ ಗ್ರಾಮದಲ್ಲಿ ವಿವಾಹದ ಸಂಭ್ರಮ ಉಂಟಾಗಿತ್ತು.ಇತ್ತೀಚೆಗೆ ಬಹುತೇಕ ಎಲ್ಲರ ವಿವಾಹಗಳು ಸಮುದಾಯ ಭವನಗಳಲ್ಲಿ ನಡೆಯುತ್ತಿರುವುದರಿಂದ ಹಳೆಯ ಕಾಲದ ಸಾಂಪ್ರದಾಯಿಕ ವಿವಾಹ ಪರಂಪರೆ ಗ್ರಾಮೀಣ ಪ್ರದೇಶದಲ್ಲಿ ಕಣ್ಮರೆಯಾಗಿದೆ.ಮಳೆಗಾಗಿ ಮದುವೆ ಮೂಡನಂಬಿಕೆಯಾಗಿದ್ದರೂ ಹಳೆಯ ಕಾಲದ ಎಲ್ಲಾ ಬಗೆಯ ವಿವಾಹ ಶಾಸ್ತ್ರಗಳನ್ನು ನಡೆಸಿದ ಗ್ರಾಮಸ್ಥರು ಸಾಂಪ್ರದಾಯಿಕವಾದ ಹಳೆಯ ವಿವಾಹ ಪದ್ದತಿಯನ್ನು ಮರು ಸೃಷ್ಠಿಸುವ ಮೂಲಕ ಯುವ ಪರಂಪರೆಗೆ ಹಳೆಯ ಕಾಲದ ವಿವಾಹ ಪದ್ದತಿಗಳನ್ನು ಪರಿಚಯಿಸಿದರು.