ಅಪರಾಧಿಯೊಬ್ಬ ತನ್ನನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡುವಂತೆ ಕೋರಿದ್ದ ಅರ್ಜಿಯನ್ನು ಮಂಗಳವಾರ ತಿರಸ್ಕರಿಸಿದ ಸುಪ್ರೀಂ ಕೋರ್ಟ್ “ಅಪರಾಧಿಗೆ ಕ್ಷಮಾದಾನ ನೀಡುವುದು ಇಲ್ಲವೇ ಆತನನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡುವುದು ಸರ್ಕಾರದ ಕಾರ್ಯಭಾರಕ್ಕೊಳಪಡುವ ಕೆಲಸವೇ ವಿನಾ ನ್ಯಾಯಾಲಯದ್ದಲ್ಲ” ಎಂದಿದೆ.
ಹೀಗಾಗಿ ತನ್ನ 1992 ರ ನೀತಿಯ ಪ್ರಕಾರ ಗುಜರಾತ್ ಸರ್ಕಾರ ಅರ್ಜಿದಾರನ ಅವಧಿಪೂರ್ವ ಬಿಡುಗಡೆಯ ಕೋರಿಕೆ ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ನಿರ್ದೇಶಿಸಿತು.
“ಸರ್ಕಾರವು ಎದುರಾಗಿರುವ ಸನ್ನಿವೇಶವನ್ನು ಪರಿಶೀಲಿಸಬೇಕು ಎಂದು ನಾವು ಹೇಳುತ್ತಿದ್ದೇವೆ. ಅವಧಿಪೂರ್ವ ಬಿಡುಗಡೆ ಎಂಬುದು ಸರ್ಕಾರದ ಕೆಲಸವಾಗಿದ್ದು ರಾಜ್ಯ ಸರ್ಕಾರ ಮರುಪರಿಶೀಲಿಸಲು ಪ್ರಕರಣ ಅರ್ಹವಾಗಿದೆ. ರಾಜ್ಯ ಸರ್ಕಾರ ಮೇಲೆ ತಿಳಿಸಿದ ಮತ್ತು 1992ರ ನೀತಿಯ ಪ್ರಕಾರ ಅವಧಿಪೂರ್ವ ಬಿಡುಗಡೆಯ ಕೋರಿಕೆ ಪರಿಗಣಿಸುವಂತೆ ತಿಳಿಸಲಾಗುತ್ತಿದೆ” ಎಂದು ನ್ಯಾಯಾಲಯ ಹೇಳಿದೆ.
ಸಹ ಆರೋಪಿಯೊಬ್ಬ ಅವಧಿಪೂರ್ವವಾಗಿ ಬಿಡುಗಡೆಯಾಗಿದ್ದರಿಂದ ತನ್ನನ್ನೂ ಹಾಗೆ ಬಿಡುಗಡೆ ಮಾಡುವಂತೆ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅರ್ಜಿದಾರ ಹಿತೇಶ್ ನ್ಯಾಯಾಲಯದ ಮೊರೆ ಹೋಗಿದ್ದ. ಆದರೆ, ಮಧ್ಯಂತರ ಜಾಮೀನಿನ ವೇಳೆ ಹಿತೇಶ್ ಐದು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದರಿಂದ ಅವಧಿಪೂರ್ವ ಬಿಡುಗಡೆ ಸಾಧ್ಯವಿಲ್ಲ ಎಂದು ಸರ್ಕಾರ ವಾದಿಸಿತ್ತು.
ಆದರೆ ಹಿತೇಶ್ಗೆ ನಾಲ್ಕು ಫರ್ಲೋಗಳು* ದೊರೆಯದೇ ಇರುವುದು ಹಾಗೂ 1992ರ ನೀತಿ ಪ್ರಕಾರ ಅವಧಿಪೂರ್ವ ಬಿಡುಗಡೆಗೆ ಅಗತ್ಯವಾಗಿರುವ 14 ವರ್ಷ ಸಜೆ ಅನುಭವಿಸಿರುವುದನ್ನು ಗಮನಿಸಿದ ನ್ಯಾಯಾಲಯವು ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಸರ್ಕಾರ ಮರುಪರಿಗಣಿಸಲು ಸೂಚಿಸಿತು.
ಫರ್ಲೋ ಎಂದರೇನು?
ಇದು ದೀರ್ಘಕಾಲದವರೆಗೆ ಶಿಕ್ಷೆಗೊಳಗಾದ ಕೈದಿಗಳಿಗೆ ಮಾತ್ರ ನೀಡುವ ತಾತ್ಕಾಲಿಕ ಬಿಡುಗಡೆ. ನಿರ್ಧಿಷ್ಟ ಅವಧಿಯ ಸಜೆಯನ್ನು ಅನುಭವಿಸಿದ ನಂತರ ಈ ಸೌಲಭ್ಯ ದೊರೆಯಲಿದ್ದು, ಇದನ್ನು ಯಾವುದೇ ಕಾರಣವಿಲ್ಲದೆಯೂ ನೀಡಬಹುದಾಗಿದೆ. ಕುಟುಂಬಸ್ಥರು ಸೇರಿದಂತೆ ಜನರನ್ನು ಭೇಟಿಯಾಗಲಿ, ಸಮಾಜದೊಂದಿಗೆ ಬೆರೆಯಲಿ ಎಂಬ ಉದ್ದೇಶದಿಂದ ಫರ್ಲೋ ನೀಡಲಾಗುತ್ತದೆ. ಆದರೆ, ಫರ್ಲೋ ಕೈದಿಯ ಹಕ್ಕೇನೂ ಅಲ್ಲ. ಪೆರೋಲ್’ಗೂ ಇದಕ್ಕೂ ವ್ಯತ್ಯಾಸವಿದೆ. ಪೆರೋಲ್ ಅನ್ನು ಯಾವುದೇ ಕೈದಿಗೆ ನೀಡಬಹುದಾಗಿದ್ದು, ನಿರ್ದಿಷ್ಟ ತುರ್ತು ಕಾರಣಗಳ ಅನ್ವಯ ಇದನ್ನು ನೀಡಲಾಗುತ್ತದೆ. ರಕ್ತ ಸಂಬಂಧಿಕರ ಮದುವೆ, ಅಂತ್ಯ ಸಂಸ್ಕಾರ ಮುಂತಾದ ಪ್ರಮುಖ ಕಾರಣಗಳಿಗಾಗಿ ಮಾತ್ರ ಪೆರೋಲ್ ನೀಡಲಾಗುತ್ತದೆ.














