ಮನೆ ರಾಜ್ಯ ಮತಾಂತರ ನಿಷೇಧ ಕಾಯ್ದೆಯನ್ನು ಸ್ವಾಗತಿಸಿದ ಪೇಜಾವರ ಶ್ರೀ

ಮತಾಂತರ ನಿಷೇಧ ಕಾಯ್ದೆಯನ್ನು ಸ್ವಾಗತಿಸಿದ ಪೇಜಾವರ ಶ್ರೀ

0

ಹಾಸನ (Hassan)-ಮತಾಂತರ ನಿಷೇಧ ಕಾಯ್ದೆಯನ್ನು ಸ್ವಾಗತಿಸಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (vishwaprasanna tirtha swamiji) ಅವರು, ಕಾಯ್ದೆಗೆ ರಾಜ್ಯಪಾಲರ ಅಂಕಿತ ದೊರೆತಿರುವುದು ಸಂತಸ ತಂದಿದೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ಪಿಡುಗು ಮನೆ ಮನೆಗಳಲ್ಲಿ ದೊಡ್ಡ ಅವಾಂತರವನ್ನೇ ಎಬ್ಬಿಸುತ್ತಿತ್ತು. ಅನೇಕ ಮನೆಗಳಲ್ಲಿ ದಂಪತಿಯನ್ನೇ ಬೇರ್ಪಡಿಸುವ ಕೆಟ್ಟ ಕಾರ್ಯ ನಡೆಯುತ್ತಿತ್ತು. ಅಲ್ಲದೆ ಒಂದೇ ಮನೆಯೊಳಗೆ ಮಕ್ಕಳು ಬೇರೆ, ಅಪ್ಪ ಅಮ್ಮಂದಿರೇ ಬೇರೆ ಆಗಿ ಅವರ ಒಳಗೆ ವೈಮನಸ್ಸು ತರುವಂತಹ ಕಾರ್ಯ ನಡೆಯುತ್ತಿತ್ತು ಎಂದು ತಿಳಿಸಿದರು.

‌ಪಠ್ಯ ಪುಸ್ತಕಗಳಲ್ಲಿ ಹೊಸ ವಿಷಯ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸ್ವಾಮೀಜಿ, ಕಾಲಕಾಲಕ್ಕೆ ಹೊಸ ವಿಚಾರಗಳನ್ನು ಸೇರ್ಪಡೆಗೊಳಿಸುವುದು ತಪ್ಪಲ್ಲ. ಭಗತ ಸಿಂಗ್ ವಿಚಾರವನ್ನು ತೆಗೆದು ಹಾಕಿಲ್ಲ, ಅದು ಬರಿ ವದಂತಿ ಎಂದು ಮಾಧ್ಯಮದಲ್ಲಿ ನೋಡಿದ್ದೇನೆ. ಇದ್ದಂತಹ ಯಾವುದೇ ಪಠ್ಯ ವಿಷಯಗಳನ್ನೂ ತೆಗೆದು ಹಾಕಿಲ್ಲ. ಹೊಸ ಭಾಗವನ್ನು ಸೇರ್ಪಡೆಗೊಳಿಸಿದ್ದೇವೆ ಎಂದು ಸಚಿವರೇ ಹೇಳಿದ್ದಾರೆ. ಹೀಗಿದ್ದರೂ, ಸುಖಾ ಸುಮ್ಮನೆ ಸಮಾಜದಲ್ಲಿ ಗುಲ್ಲು ಎಬ್ಬುಸುವಂತಹದ್ದು ಒಳ್ಳೆಯದಲ್ಲ ಎಂದು ನುಡಿದರು.

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಹಾಗೂ ಶ್ರೀರಂಗಪಟ್ಟಣ ಮಸೀದಿ ವಿವಾದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದನ್ನು ಈಗಿನವರು ಯಾರೂ ಮಾಡಿದ್ದಲ್ಲ. ಹಿಂದಿನ ಕಾಲದಲ್ಲೇ ನಿರ್ಮಿಸಲಾಗಿದೆ. ಮಂದಿರ ಇದ್ದರೆ, ಶಿವಲಿಂಗ ದೊರೆತಿದ್ದರೆ ಇದರ ಬಗ್ಗೆ ಸುಪ್ರೀಂ ಕೋರ್ಟ್‍ನಲ್ಲಿ ಮಂದಿರ ಇದೆ ಎಂದು ತೀರ್ಪು ಬಂದರೆ ಅದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು.

ತೀರ್ಪು ಸ್ವೀಕಾರ ಮಾಡಿ, ಆ ಸಮಾಜ ಅದನ್ನು ಬಿಟ್ಟುಕೊಡಬೇಕು. ಶ್ರೀರಂಗಪಟ್ಟಣ ಒಂದೇ ಅಲ್ಲ, ಎಲ್ಲಲ್ಲಿ ಇಂತಹದ್ದು ನಡೆದಿದೆ. ಯಾರದ್ದೋ ತಪ್ಪಿನಿಂದ ಆಗಿದೆ. ತಪ್ಪು ತಪ್ಪೇ, ಹಾಗಾಗಿ ಅದನ್ನು ಒಪ್ಪಿಕೊಳ್ಳಬೇಕು ಎಂದರು.

ಸಮಾಜದ ಸಾಮರಸ್ಯ ಕಾಪಾಡಬೇಕು. ಯಾವುದೇ ಮಂದಿರವನ್ನು ಖರೀದಿಸಿ ಮಾರ್ಪಾಡುಗೊಳಿಸಿದ್ದರೆ ಅದು ತಪ್ಪಲ್ಲ. ಆದರೆ, ಅತಿಕ್ರಮಣ ಮಾಡಿ ಮಾರ್ಪಾಡು ಮಾಡಿರುವುದನ್ನು ಒಪ್ಪುವಂತಹದ್ದಲ್ಲ. ಹಾಗಾಗಿ ಅದು ಬದಲಾಗಬೇಕು. ಹಿಂದಿನ ಸ್ಥಿತಿಯ ರೀತಿ ಆಗಬೇಕು. ಮಂದಿರವನ್ನು ಮಂದಿರವನ್ನಾಗಿ ಉಳಿಸಬೇಕು. ಸತ್ಯ ಆವಿಷ್ಕಾರಗೊಳ್ಳುವುದು ಒಳ್ಳೆಯದು ಎಂದು ಹೇಳಿದರು.