ಬೆಂಗಳೂರು: ಸಾರ್ವಜನಿಕರು ತಮ್ಮ ಬಳಿ ಇರಿಸಿಕೊಂಡಿರುವ ಹುಲಿ ಉಗುರು, ಆನೆ ದಂತ ಸೇರಿದಂತೆ ವನ್ಯಜೀವಿ ಅಂಗಾಂಗಗಳನ್ನು ಸರ್ಕಾರಕ್ಕೆ ಮರಳಿಸಲು ಮೂರು ತಿಂಗಳ ಕಾಲಾವಕಾಶ ನೀಡುವ ಪ್ರಸ್ತಾವವಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಜನರು ಅರಿವಿದ್ದೋ, ಇಲ್ಲದೆಯೋ ತಮ್ಮ ಬಳಿ ಇರಿಸಿಕೊಂಡಿರುವ ವನ್ಯಜೀವಿಗಳ ಅಂಗಾಂಗಗಳನ್ನು ಸರ್ಕಾರದ ವಶಕ್ಕೆ ಪಡೆದು ನಾಶಪಡಿಸಲಾಗುವುದು. ಇದಕ್ಕಾಗಿ ಮೂರು ತಿಂಗಳ ಅವಧಿ ನೀಡಲಾಗುವುದು. ಸಂಪುಟ ಸಭೆಯಲ್ಲಿ ಈ ಕುರಿತು ಪ್ರಸ್ತಾವ ಮಂಡಿಸಿ, ಅನುಮೋದನೆ ಪಡೆಯಲಾಗುವುದು’ ಎಂದರು.
ಈಗಾಗಲೇ ಅರಣ್ಯ ಇಲಾಖೆಯ ಸ್ವಾಧೀನದಲ್ಲಿರುವ ವನ್ಯಜೀವಿ ಅಂಗಾಂಗಗಳನ್ನೂ ನಾಶಪಡಿಸಲಾಗುವುದು. ಮೈಸೂರಿನ ಅರಣ್ಯ ಇಲಾಖೆ ಸಂಗ್ರಹಾಗಾರದಲ್ಲಿ ದಾಸ್ತಾನು ಮಾಡಲಾಗಿರುವ ವನ್ಯಜೀವಿಗಳ ಅಂಗಾಂಗಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ನಾಶಪಡಿಸಲು ಯೋಚಿಸಲಾಗಿದೆ ಎಂದು ತಿಳಿಸಿದರು.
ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಾಣಕ್ಕೆ ಜಮೀನು ಕಳೆದುಕೊಂಡು ಸಂತ್ರಸ್ತರಾದ ಕುಟುಂಬಗಳಿಗೆ ನೀಡಲಾಗಿರುವ ಅರಣ್ಯ ಜಮೀನಿನ ವಿಚಾರದಲ್ಲಿ ರಾಜ್ಯ ಸರ್ಕಾರ ಸಂತ್ರಸ್ತರ ಪರ ನಿಲುವು ತಾಳಿದೆ. ಸಂತ್ರಸ್ತರ ಪರವಾದ ನಿಲುವಿನೊಂದಿಗೆ ಅರಣ್ಯ ಇಲಾಖೆಯು ಹೈಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಈಗ ಹೈಕೋರ್ಟ್ ನಲ್ಲಿ ಪ್ರಕರಣವಿದೆ. ಅಲ್ಲಿ ಸಂತ್ರಸ್ತರ ಬೆಂಬಲಿಸಿ ಪ್ರಮಾಣಪತ್ರ ಸಲ್ಲಿಸಿದ್ದೇವೆ. ಸುಪ್ರೀಂಕೋರ್ಟ್ ನಲ್ಲೂ ಸಂತ್ರಸ್ತರಿಗೆ ಜಮೀನು ನೀಡುವುದರ ಪರವಾಗಿ ಪ್ರಮಾಣಪತ್ರ ಸಲ್ಲಿಸುತ್ತೇವೆ ಎಂದರು.