ಮನೆ ಕಾನೂನು ವೇಶ್ಯಾವಾಟಿಕೆ ಕಾನೂನು ಬದ್ಧ: ಸುಪ್ರೀಂ ಕೋರ್ಟ್

ವೇಶ್ಯಾವಾಟಿಕೆ ಕಾನೂನು ಬದ್ಧ: ಸುಪ್ರೀಂ ಕೋರ್ಟ್

0

ನವದೆಹಲಿ (New Delhi)-ಇನ್ನು ಮುಂದೆ ವೇಶ್ಯಾವಾಟಿಕೆ ಕಾನೂನು ಬದ್ಧ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಜತೆಗೆ ಪೊಲೀಸರು ವೇಶ್ಯಾವಾಟಿಕೆ ಸಂಬಂಧ ಮಧ್ಯಪ್ರವೇಶಿಸುವಂತಿಲ್ಲ, ಅವರ ಮೇಲೆ ಕ್ರಮ ಕೈಗೊಂಡರೆ ಪೊಲೀಸರ ವಿರುದ್ಧವೇ ಕ್ರಿಮಿನಲ್‌ ಮೊಖದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದೆ.
ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ. ನ್ಯಾಯಮೂರ್ತಿ ಎಲ್‌.ನಾಗೇಶ್ವರ ರಾವ್‌ ಅವರ ಅಧ್ಯಕ್ಷತೆಯ ಪೀಠ ಇಂದು ಆದೇಶ ನೀಡಿದೆ. ವೇಶ್ಯಾವಾಟಿಕೆಯಲ್ಲಿ ತೊಡಗಿದ ಮಹಿಳೆಯರ ಹಕ್ಕುಗಳ ರಕ್ಷಣೆ ಕುರಿತಂತೆ ಆರು ನಿರ್ದೇಶನಗಳನ್ನು ಕೋರ್ಟ್‌ ನೀಡಿದೆ.
ವೇಶ್ಯಾವಾಟಿಕೆಯಲ್ಲಿ ಭಾಗಿಯಾದ ಮಹಿಳೆಯರಿಗೆ ಸಮಾಜದ ಪ್ರತಿಯೊಬ್ಬರಿಗೂ ಸಿಗಬೇಕಾದ ರಕ್ಷಣೆಯ ಹಕ್ಕಿದೆ. ಕ್ರಿಮಿನಲ್‌ ಮೊಕದ್ದಮೆ ಹೂಡುವಾಗ ಅವರ ವಯಸ್ಸು ಮತ್ತು ಅವರು ಸ್ವ ಇಚ್ಚೆಯಿಂದ ಭಾಗಿಯಾಗಿದ್ದಾರ ಎಂಬ ಬಗ್ಗೆ ತಿಳಿದುಕೊಳ್ಳಬೇಕು. ಒಂದು ವೇಳೇ ಸ್ವಂತ ನಿರ್ಧಾರದ ಮೇಲೆ ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಅಥವಾ ಕ್ರಿಮಿನಲ್‌ ಮೊಕದ್ದಮೆ ಹೂಡುವ ಹಕ್ಕು ಪೊಲೀಸರಿಗಿಲ್ಲ. ಅನಗತ್ಯ ಮಧ್ಯಪ್ರವೇಶ ಮಾಡುವುದನ್ನು ಕೋರ್ಟ್‌ ಸಹಿಸುವುದಿಲ್ಲ. ವೇಶ್ಯಾವಾಟಿಕೆಯೂ ಒಂದು ವೃತ್ತಿ. ದೇಶದ ಪ್ರತಿ ನಾಗರಿಕನಿಗೆ ಸಿಗುವ ರಕ್ಷಣೆ, ಹಕ್ಕು ಮತ್ತು ಗೌರವ ಈ ಮಹಿಳೆಯರಿಗೂ ದೊರೆಯಬೇಕು ಎಂದು ಸುಪ್ರೀಂ ಕೋರ್ಟ್‌ ಪೀಠ ತಿಳಿಸಿದೆ.
ಸೆಕ್ಸ್‌ ವರ್ಕರ್‌ಗಳನ್ನು ಬಂಧಿಸುವಂತಿಲ್ಲ, ಹಿಂಸಿಸುವಂತಿಲ್ಲ, ಶಿಕ್ಷಿಸುವಂತಿಲ್ಲ ಮತ್ತು ಸಂತ್ರಸ್ತರನ್ನಾಗಿಸುವಂತಿಲ್ಲ ಎಂದು ಕೋರ್ಟ್‌ ಆದೇಶಿಸಿದೆ. ವೇಶ್ಯಾವಾಟಿಕೆ ನಡೆಯುತ್ತಿರುವ ಸ್ಥಳಗಳ ಮೇಲೆ ಪೊಲೀಸರು ದಾಳಿ ಮಾಡಿ ಮಹಿಳೆಯರ ಮೇಲೆ ಕ್ರಮ ಕೈಗೊಳ್ಳುವಂತಿಲ್ಲ. ವೇಶ್ಯಾವಾಟಿಕೆಯ ಅಡ್ಡೆಯನ್ನು ನಡೆಸುವುದು ಕಾನೂನು ಬಾಹಿರ, ಆದರೆ ಒಪ್ಪಿತ ವೇಶ್ಯಾವಾಟಿಕೆ ವೃತ್ತಿ ಕಾನೂನು ಬಾಹಿರವಲ್ಲ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.
ವೇಶ್ಯಾವಾಟಿಕೆಯಲ್ಲಿ ಭಾಗಿಯಾಗುತ್ತಿರುವ ಮಹಿಳೆ 18 ವರ್ಷ ಮೇಲ್ಪಟ್ಟವಳು ಮತ್ತು ಒಪ್ಪಿಗೆಯಿಂದಲೇ ವೃತ್ತಿಯಲ್ಲಿ ಭಾಗಿಯಾಗಿದ್ದಾಳೆ ಅಂದ ಮೇಲೆ ಅದು ಕಾನೂನಾತ್ಮಕವಾಗಿ ತಪ್ಪಲ್ಲ. ಪೊಲೀಸರು ಮಧ್ಯಪ್ರವೇಶಿಸುವುದಾಗಲೀ, ಮೊಕದ್ದಮೆ ಹೂಡುವುದಾಗಲೀ ಮಾಡಿದರೆ ಅದು ಕಾನೂನು ಬಾಹಿರ ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.
ವೇಶ್ಯೆಯರ ಮಕ್ಕಳನ್ನು ಕೇವಲ ಆಕೆ ವೇಶ್ಯೆ ಎಂಬ ಕಾರಣಕ್ಕೆ ದೂರ ಮಾಡುವಂತಿಲ್ಲ. ಆಕೆ ಸೆಕ್ಸ್‌ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾಳೆ, ಮತ್ತು ಬೇರೆ ಉದ್ಯಮಗಳಂತೆ ಅದೂ ಒಂದು ಉದ್ಯಮ. ಮೂಲಭೂತ ಮಾನವೀಯ ರಕ್ಷಣೆ, ಹಕ್ಕು ಮತ್ತು ಗೌರವ ವೇಶ್ಯೆ ಮತ್ತು ಆಕೆಯ ಮಕ್ಕಳಿಗೆ ಸಿಗಲೇಬೇಕು ಎಂದು ಕೋರ್ಟ್‌ ತಿಳಿಸಿದೆ.
ಒಂದು ವೇಳೆ ವೇಶ್ಯಾವಾಟಿಕೆಯಲ್ಲಿರುವ ಮಹಿಳೆ ಪೊಲೀಸರಿಗೆ ಆಕೆಯ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿದರೆ, ಪೊಲೀಸರು ಕ್ರಮ ಕೈಗೊಳ್ಳಬೇಕು. ಆಕೆಯ ವೃತ್ತಿಯನ್ನು ಆಧರಿಸಿ ಪೂರ್ವಾಗ್ರಹಪೀಡಿತರಾಗಿ ವ್ಯವಹರಿಸಬಾರದು. ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸಿಗುವ ರಕ್ಷಣೆ ಮತ್ತು ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಲೈಂಗಿಕ ದೌರ್ಜನ್ಯಕ್ಕೊಳಗಾದ ವೇಶ್ಯೆ ವೃತ್ತಿಯಲ್ಲಿರುವ ಮಹಿಳೆಗೂ ಸಿಗಬೇಕು ಎಂದು ಕೋರ್ಟ್‌ ಹೇಳಿದೆ.
ವೇಶ್ಯಾವಾಟಿಕೆ ಪರ ಮತ್ತು ವಿರೋಧದ ಚರ್ಚೆಗಳು ದಶಕಗಳಿಂದ ಕೇಳಿ ಬರುತ್ತಿವೆ. ವೇಶ್ಯಾವಾಟಿಕೆಯನ್ನು ಕಾನೂನುಬದ್ಧ ಗೊಳಿಸಬೇಕು ಮತ್ತು ಅದರಲ್ಲಿ ತೊಡಗಿಕೊಂಡ ಮಹಿಳೆಯರನ್ನು ಸಮಾಜದಲ್ಲಿ ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂಬ ವಾದ ಈ ಹಿಂದಿನಿಂದಲೂ ಕೇಳಿ ಬಂದಿತ್ತು.

ಹಿಂದಿನ ಲೇಖನರಾಜ್ಯದಲ್ಲಿ 153 ಮಂದಿಗೆ ಕೋವಿಡ್ ಪಾಸಿಟಿವ್
ಮುಂದಿನ ಲೇಖನಜಮ್ಮು-ಕಾಶ್ಮೀರದಲ್ಲಿ ಎನ್‌ ಕೌಂಟರ್‌: ನಾಲ್ವರು ಉಗ್ರರ ಹತ್ಯೆ