ಮನೆ ಸುದ್ದಿ ಜಾಲ LPG ಪೂರೈಕೆಗೆ ಮುನ್ನೆಚ್ಚರಿಕೆ; 30 ದಿನಗಳ ಗ್ಯಾಸ್ ಸಂಗ್ರಹಕ್ಕೆ ತೈಲ ಕಂಪನಿಗಳಿಗೆ ಕೇಂದ್ರ ಸೂಚನೆ

LPG ಪೂರೈಕೆಗೆ ಮುನ್ನೆಚ್ಚರಿಕೆ; 30 ದಿನಗಳ ಗ್ಯಾಸ್ ಸಂಗ್ರಹಕ್ಕೆ ತೈಲ ಕಂಪನಿಗಳಿಗೆ ಕೇಂದ್ರ ಸೂಚನೆ

0

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಜಾಗತಿಕ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ನಡುವೆ, ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಲಭ್ಯತೆ ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಕನಿಷ್ಠ 30 ದಿನಗಳ ಬೇಡಿಕೆಯನ್ನು ಪೂರೈಸುವಷ್ಟು LPG ಸಂಗ್ರಹ ಸಾಮರ್ಥ್ಯ ಹೊಂದುವಂತೆ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.

ಆಯಕಟ್ಟಿನ ಸಮುದ್ರ ಮಾರ್ಗವಾದ ಸ್ಟ್ರೇಟ್ ಆಫ್ ಹಾರ್ಮುಜ್ ಪ್ರದೇಶದಲ್ಲಿನ ಅನಿಶ್ಚಿತ ಪರಿಸ್ಥಿತಿಯಿಂದ ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸಂಸ್ಥೆಗಳಿಗೆ ಪ್ರಸ್ತುತ ವಾಣಿಜ್ಯ ದಾಸ್ತಾನುಗಳ ಜೊತೆಗೆ ಹೆಚ್ಚುವರಿ LPG ಸಂಗ್ರಹ ಸಾಮರ್ಥ್ಯ ನಿರ್ಮಾಣದ ಯೋಜನೆ ರೂಪಿಸಲು ನಿರ್ದೇಶಿಸಲಾಗಿದೆ.

ಈ ಕುರಿತು ಮಾತನಾಡಿದ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, “ದೀರ್ಘಾವಧಿಯ LPG ಭದ್ರತಾ ಸಂಗ್ರಹ ವ್ಯವಸ್ಥೆ ಕುರಿತು ಕಾರ್ಯ ನಡೆಯುತ್ತಿದೆ. ತೈಲ ಮಾರುಕಟ್ಟೆ ಕಂಪನಿಗಳು ಕನಿಷ್ಠ 30 ದಿನಗಳ LPG ಸಂಗ್ರಹ ಹೊಂದುವ ಯೋಜನೆ ಸಿದ್ಧಪಡಿಸುತ್ತಿದ್ದು, ಅದರ ಅನುಷ್ಠಾನ ಪ್ರಕ್ರಿಯೆ ಪ್ರಗತಿಯಲ್ಲಿದೆ” ಎಂದು ತಿಳಿಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದ ಭಾರತ ಸೇರಿದಂತೆ ಹಲವು ದೇಶಗಳ ಇಂಧನ ಪೂರೈಕೆಗೆ ಸವಾಲು ಎದುರಾಗುವ ಸಾಧ್ಯತೆ ಇದೆ. ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಬರುವ ಕಚ್ಚಾ ತೈಲ, ನೈಸರ್ಗಿಕ ಅನಿಲ ಹಾಗೂ LPG ಸರಬರಾಜಿನ ಮೇಲೆ ಈ ಬೆಳವಣಿಗೆ ಪರಿಣಾಮ ಬೀರಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದರ ಜೊತೆಗೆ ದೇಶದ ಕಚ್ಚಾ ತೈಲ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಕೆಲಸವೂ ಮುಂದುವರಿದಿದೆ ಎಂದು ಸರ್ಕಾರ ತಿಳಿಸಿದೆ.

ಆದರೆ, ದೇಶದಲ್ಲಿ ಸದ್ಯ ಯಾವುದೇ ಇಂಧನ ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪೆಟ್ರೋಲ್, ಡೀಸೆಲ್, LPG, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಸಮರ್ಪಕ ದಾಸ್ತಾನು ಲಭ್ಯವಿದ್ದು, ತೈಲ ಸಂಸ್ಕರಣಾ ಘಟಕಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ. ಜೊತೆಗೆ LPG ಉತ್ಪಾದನೆಯು ದಿನಕ್ಕೆ ಸುಮಾರು 52,000 ಟನ್ ತಲುಪಿದ್ದು, ಇದು ಇದುವರೆಗಿನ ಗರಿಷ್ಠ ಮಟ್ಟವಾಗಿದೆ ಎಂದು ಮಾಹಿತಿ ನೀಡಿದೆ.