ಕಲಬುರಗಿ(Kalburgi): ಪಿಎಸ್‌ಐ(PSI) ನೇಮಕಾತಿ(Recruitment) ಪರೀಕ್ಷೆಯಲ್ಲಿ(Exam) ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹಾಗೂ ಬಿಜೆಪಿ ನಾಯಕಿಯರಾದ ದಿವ್ಯಾ ಹಾಗರಗಿ(Divya Hagaragi) ಸೇರಿ ಐವರನ್ನು ಸಿಐಡಿ ಅಧಿಕಾರಿಗಳು(CID Officials) ಬಂಧಿಸಿದ್ದಾರೆ(Arrested).
ಮಹಾರಾಷ್ಟ್ರದ ಪುಣೆಯಲ್ಲಿ ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದು , ದಿವ್ಯಾ ಹಾಗರಗಿ ಒಡೆತನದ ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕಾಶೀನಾಥ, ಈ ಶಾಲೆಯ ಶಿಕ್ಷಕಿಯರಾದ ಅರ್ಚನಾ, ಸುನಂದಾ ಹಾಗೂ ಅಭ್ಯರ್ಥಿ ಶಾಂತಿಬಾಯಿ ಬಂಧಿತರಾಗಿದ್ದಾರೆ. ಬಂಧಿತ ಆರೋಪಿಗಳನ್ನು ಕಲಬುರಗಿಗೆ ಕರೆತರಲಾಗುತ್ತಿದೆ ಎಂಬ ಮಾಹಿತಿ ಸಿಐಡಿ ಮೂಲಗಳಿಂದ ಲಭ್ಯವಾಗಿದೆ.
ಏನಿದು ಪ್ರಕರಣ ? : ಪಿಎಸ್‌ಐ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗುತ್ತಿದ್ದಂತೆ ಈ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದು, ಒಬ್ಬ ಅಭ್ಯರ್ಥಿಯ ಒಎಂಆರ್ ಶೀಟ್ ಸಹ ಬಹಿರಂಗಗೊಂಡಿತ್ತು. ರಾಜ್ಯ ಸರ್ಕಾರ ಇದರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಅಧಿಕಾರಿಗಳು ಇಲ್ಲಿಯ ಚೌಕ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುತ್ತಿದ್ದಂತೆ ದಿವ್ಯಾ ನಾಪತ್ತೆಯಾಗಿದ್ದರು. 15 ದಿನಗಳಿಂದ ಹುಡುಕಾಟ ನಡೆಸಿದರೂ ಅವರನ್ನು ಪತ್ತೆಹಚ್ಚಲು ಸಿಐಡಿಗೆ ಸಾಧ್ಯವಾಗಿರಲಿಲ್ಲ. ವಿರೋಧ ಪಕ್ಷಗಳು ಇದನ್ನೇ ಅಸ್ತ್ರವಾಗಿಟ್ಟುಕೊಂಡು ಟೀಕಿಸುತ್ತಿದ್ದವು. ಅಲ್ಲದೇ ಸ್ಥಳೀಯ ನ್ಯಾಯಾಲಯ ದಿವ್ಯಾ ಹಾಗೂ ಇತರ ಆರು ಆರೋಪಿಗಳ ವಿರುದ್ಧ ಬಂಧನ ವಾರೆಂಟ್ ಹೊರಡಿಸಿತ್ತು. ವಾರದಲ್ಲಿ ಶರಣಾಗಲು ಸೂಚಿಸಿತ್ತು. ಶರಣಾಗದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವನ್ನೂ ನೀಡಿತ್ತು.
ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿಯೇ ಅಕ್ರಮ ನಡೆದಿದೆ. ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ತನ್ನ ಶಾಲೆಯ ಶಿಕ್ಷಕಿಯರ ಮೂಲಕ ದಿವ್ಯಾ ಅವರು, ತಮಗೆ ಹಣ ನೀಡಿದ ಅಭ್ಯರ್ಥಿಗಳ ಒಎಂಆರ್ ಶೀಟ್ ತಿದ್ದಿಸಿದ್ದಾರೆ. ಅಲ್ಲದೇ ಅಫಜಲಪುರ ತಾಲ್ಲೂಕು ಸೊನ್ನದ ಆರ್.ಡಿ. ಪಾಟೀಲ ಸಹೋದರರು ಅಭ್ಯರ್ಥಿಗಳಿಂದ ಹಣ ಪಡೆದು ಬ್ಲೂಟೂತ್ ಮೂಲಕ ಅವರಿಗೆ ಉತ್ತರ ಹೇಳಿದ್ದಾರೆ ಎಂಬೆಲ್ಲ ಆರೋಪಗಳು ಇವೆ. ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ವೀರೇಶ ನಿಡಗುಂದಾ ಎಂಬ ಅಭ್ಯರ್ಥಿಯ ಬಂಧನದೊಂದಿಗೆ ಅಕ್ರಮದ ಒಂದೊಂದೇ ವಿವರಗಳು ಬಿಚ್ಚಿಕೊಳ್ಳತೊಡಗಿದವು. ಅಕ್ರಮದ ಪ್ರಮುಖ ಕಿಂಗ್ ಪಿನ್ ರುದ್ರಗೌಡ ಪಾಟೀಲ, ಅವರ ಸಹೋದರ ಕಾಂಗ್ರೆಸ್ ಮುಖಂಡ ಮಹಾಂತೇಶ ಪಾಟೀಲ, ದಿವ್ಯಾ ಪತಿ ರಾಜೇಶ ಹಾಗರಗಿ ಸೇರಿದಂತೆ ಅಭ್ಯರ್ಥಿಗಳು, ಮೇಲ್ವಿಚಾರಕಿಯರು, ಸರ್ಕಾರಿ ಮಹಿಳಾ ಸಿಬ್ಬಂದಿ ಸೇರಿದಂತೆ 17 ಜನರನ್ನು ಸಿಐಡಿ ಪೊಲೀಸರು ಈ ವರೆಗೆ ಬಂಧಿಸಿದ್ದರು. ಆ ಪೈಕಿ ಏಳು ಅಭ್ಯರ್ಥಿಗಳು ಸಿಐಡಿ ವಶದಲ್ಲಿದ್ದಾರೆ.