ಮನೆ ಕಾನೂನು ಪಿಎಸ್ಐ ನೇಮಕಾತಿ ಮರು ಪರೀಕ್ಷೆ ರಾಜ್ಯ ಸರ್ಕಾರಕ್ಕೆ ಆಡಳಿತ ನ್ಯಾಯ ಮಂಡಳಿ ನೋಟಿಸ್ ಮೇ...

ಪಿಎಸ್ಐ ನೇಮಕಾತಿ ಮರು ಪರೀಕ್ಷೆ ರಾಜ್ಯ ಸರ್ಕಾರಕ್ಕೆ ಆಡಳಿತ ನ್ಯಾಯ ಮಂಡಳಿ ನೋಟಿಸ್ ಮೇ 18 ಕ್ಕೆ ವಿಚಾರಣೆ ಮುಂದೂಡಿಕೆ

0

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳ (ಪಿಎಸ್‌ಐ) ನೇಮಕಾತಿಗೆ ಸಂಬಂಧಿಸಿದ ಹಗರಣ ಬೆಳಕಿಗೆ ಬಂದ ಬೆನ್ನಿಗೇ ಮರುಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಬದಿಗೆ ಸರಿಸುವಂತೆ ಕೋರಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಇಪ್ಪತ್ತೆಂಟು ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿ ಸಂಬಂಧ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು ಬುಧವಾರ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ

ಪೊಲೀಸ್‌ ಇಲಾಖೆಯ 545 ಸಬ್‌ ಇನ್ಸ್‌ಪೆಕ್ಟರ್‌ಗಳ ಆಯ್ಕೆ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವುದು ರಾಜ್ಯಾದ್ಯಂತ ಸಂಚಲನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮರುಪರೀಕ್ಷೆಗೆ ಮುಂದಾಗಿದೆ. ಆದರೆ ರಾಜ್ಯ ಸರ್ಕಾರದ ಈ ನಡೆಯಿಂದ ಯಾವುದೇ ಅಕ್ರಮವೆಸಗದೆ ಕಳಂಕ ರಹಿತವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದ್ದು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ “ಕಳಂಕ ರಹಿತ ಮತ್ತು ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ ಈಗಾಗಲೇ ಹೊರಡಿಸಿರುವ ಆದೇಶದ ಪ್ರಕಾರ ನೇಮಕಾತಿ ಆದೇಶ ನೀಡಲು ಆದೇಶಿಸಬೇಕು” ಎಂದು ಕೋರಿ ಬೆಂಗಳೂರಿನ ಪವಿತ್ರಾ ಎಲ್‌ ಎನ್‌ ಸೇರಿದಂತೆ 28 ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಮೊರೆ ಹೋಗಿದ್ದಾರೆ.

ಮನವಿಯ ವಿಚಾರಣೆಯನ್ನು ನ್ಯಾಯಿಕ ಸದಸ್ಯ ಟಿ ನಾರಾಯಣ ಸ್ವಾಮಿ ಅವರ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠ ನಡೆಸಿದ್ದು, ಪ್ರತಿವಾದಿಗಳಾದ ಒಳಾಡಳಿತ ಇಲಾಖೆಯ (ಪೊಲೀಸ್‌ ಸೇವೆಗಳು-1) ಪ್ರಧಾನ ಕಾರ್ಯದರ್ಶಿ, ಪೊಲೀಸ್‌ ಮಹಾನಿರ್ದೇಶಕರು, ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು, ಅಪರಾಧ ತನಿಖಾ ವಿಭಾಗದ (ಸಿಐಡಿ) ಪೊಲೀಸ್‌ ಮಹಾನಿರ್ದೇಶಕರಿಗೆ ನೋಟಿಸ್‌ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಆರ್ರವಿಶಂಕರ್ ಅವರು ಪಿಎಸ್‌ಐ ಪರೀಕ್ಷೆಗೆ ಸಂಬಂಧಿಸಿದಂತೆ ಒಂದು ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮದ ಕುರಿತಾಗಿ ಎಫ್‌ಐಆರ್‌ ದಾಖಲಿಸಲಾಗಿದೆ. ಈ ಸಂಬಂಧ ಸಿಐಡಿ ತನಿಖೆ ನಡೆಸುತ್ತಿದ್ದು, ಮಧ್ಯಂತರ ವರದಿ ಆಧರಿಸಿ ರಾಜ್ಯ ಸರ್ಕಾರವು ಮರು ಪರೀಕ್ಷೆ ನಡೆಸುವುದಾಗಿ ಆದೇಶಿಸಿದೆ. ಸಿಐಡಿ ತನಿಖೆ ಪೂರ್ಣಗೊಳ್ಳದಿರುವಾಗ ಇಡೀ ನೇಮಕಾತಿ ರದ್ದುಪಡಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಆಕ್ಷೇಪಿಸಿದರು.

ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ 545 ಅಭ್ಯರ್ಥಿಗಳಿಗೂ ಸಿಐಡಿ ಪತ್ರ ಬರೆದು ಅವರಿಗೆ ಒಎಂಆರ್‌ ಸಲ್ಲಿಸುವಂತೆ ಸೂಚಿಸಿದ್ದು, ಎಲ್ಲರೂ ಒಎಂಆರ್‌ ಪ್ರತಿ ಸಲ್ಲಿಸಿದ್ದಾರೆ. ಈಗ ಆ ಒಎಂಆರ್‌ ಪ್ರತಿಗಳನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಒಳಪಡಿಸದಿದ್ದರೆ ಕಳಂಕಿತರು ಮತ್ತು ಕಳಂಕರಹಿತರು ಯಾರು ಎಂಬುದು ತಿಳಿಯುವುದಿಲ್ಲ. ಮೂರು ಮತ್ತು ನಾಲ್ಕನೇ ಪ್ರತಿವಾದಿಗಳಾದ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಮತ್ತು ಸಿಐಡಿ ಪೊಲೀಸ್‌ ಮಹಾನಿರ್ದೇಶಕರು ಯಾವುದೇ ತನಿಖೆ ನಡೆಸಿ ವರದಿ ಸಲ್ಲಿಸಿಲ್ಲ. ಬದಲಿಗೆ, ಕಳಂಕಿತ ಮತ್ತು ಕಳಂಕರಹಿತರನ್ನು ಪ್ರತ್ಯೇಕಿಸಲಾಗುತ್ತಿದ್ದು, ಮುಗ್ಧ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರವು ತನಿಖೆ ನಡೆಸಲು ಸಿಐಡಿಗೆ ಪ್ರಕರಣ ವಹಿಸಿದೆ ಎಂದರು.

ಕಲಬುರ್ಗಿಯ ಒಂದು ಪರೀಕ್ಷಾ ಕೇಂದ್ರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಸಿಐಡಿ ಮಧ್ಯಂತರ ವರದಿ ಸಲ್ಲಿಸಿದೆ. ಇದನ್ನು ಆಧರಿಸಿ ಈಗ ಮರು ಪರೀಕ್ಷೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಪಿಎಸ್‌ಐ ಹುದ್ದೆಗೆ 1.2 ಲಕ್ಷ ಅಭ್ಯರ್ಥಿಗಳು ಅರ್ಜಿ ಹಾಕಿದ್ದು, ದೈಹಿಕ ಪರೀಕ್ಷೆ ಮುಗಿದು 54,104 ಮಂದಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಶೇ. 1ರಷ್ಟು ಅಭ್ಯರ್ಥಿಗಳೂ ಆಯ್ಕೆಯಾಗಿಲ್ಲ. ಪ್ರತಿ ಬಾರಿಯೂ ಸಚಿನ್‌ ತೆಂಡೂಲ್ಕರ್‌ ಅವರು ಶತಕ ಬಾರಿಸಲಾಗದು. ಪ್ರತಿ ಪರೀಕ್ಷೆಯಲ್ಲೂ ಟಾಪರ್‌ ಆಗಿ ಹೊರಹೊಮ್ಮಲಾಗದು. ಹೀಗಾಗಿ, ಹೊಸದಾಗಿ ಮರು ಪರೀಕ್ಷೆ ನಡೆಸಲಾಗುವುದು ಎಂಬುದಕ್ಕೆ ತಡೆ ನೀಡಬೇಕು” ಎಂದು ಕೋರಿದರು.

ಇದಕ್ಕೆ ಒಪ್ಪದ ಪೀಠವು ರಾಜ್ಯ ಸರ್ಕಾರ ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದ್ದು, ವಿಚಾರಣೆಯನ್ನು ಮೇ 18ಕ್ಕೆ ಮುಂದೂಡಿತು.

ಮಧ್ಯಂತರ ಕೋರಿಕೆಅಂತಿಮ ಪಟ್ಟಿಯು ಹಾಲಿ ಮನವಿಯ ನಿರ್ಧಾರಕ್ಕೆ ಒಳಪಟ್ಟಿರುತ್ತದೆ ಎಂದು ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ಒಳಾಡಳಿತ ಇಲಾಖೆಯ (ಪೊಲೀಸ್‌ ಸೇವೆಗಳು-1) ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಬೇಕು ಎಂದು ಮಧ್ಯಂತರ ಮನವಿ ಮಾಡಲಾಗಿದೆ.