ಮನೆ ಕಾನೂನು ಮೇಲ್ಮನವಿ ನಿರ್ಧರಿಸುವಲ್ಲಿ ವಿಳಂಬವಾದದ್ದಕ್ಕೆ ಶಿಕ್ಷೆ ಕಡಿಮೆಗೊಳಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಮೇಲ್ಮನವಿ ನಿರ್ಧರಿಸುವಲ್ಲಿ ವಿಳಂಬವಾದದ್ದಕ್ಕೆ ಶಿಕ್ಷೆ ಕಡಿಮೆಗೊಳಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

0

ಮೇಲ್ಮನವಿ ನಿರ್ಧರಿಸುವಲ್ಲಿ ವಿಳಂಬವಾಗಿದೆ ಎಂಬ ಒಂದೇ ಕಾರಣಕ್ಕೆ ಹೈಕೋರ್ಟೊಂದು ಆರೋಪಿಗಳಿಗೆ ಅಸಮಂಜಸ ಮತ್ತು ಅಸಮರ್ಪಕ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. [ರಾಜಸ್ಥಾನದ ಸರ್ಕಾರ ಮತ್ತು ಬನ್ವಾರಿ ಲಾಲ್ ಇನ್ನಿತರರ ನಡುವಣ ಪ್ರಕರಣ].

ಅರ್ಹತೆ ಆಧಾರದಲ್ಲಿ ಮೇಲ್ಮನವಿ ಪರಿಗಣಿಸದೇ ಇರಲು ವಿಳಂಬವನ್ನು ಮಾತ್ರ ಆಧಾರವಾಗಿಸಲು ಸಾಧ್ಯವಿಲ್ಲ ಎಂದು ಕೂಡ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ತಿಳಿಸಿದೆ.

ಮೊಟಕು ವಿಧಾನ ಅಳವಡಿಸಿಕೊಂಡು ಕ್ರಿಮಿನಲ್ ಮೇಲ್ಮನವಿಗಳನ್ನು ಹೈಕೋರ್ಟ್‌ಗಳು ತುರ್ತಾಗಿ ವಿಲೇವಾರಿ ಮಾಡಬಾರದು. ಕ್ರಿಮಿನಲ್ ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ಹೈಕೋರ್ಟ್‌ಗಳು ಅಡ್ಡದಾರಿ (ಶಾರ್ಟ್‌ ಕಟ್‌) ವಿಧಾನ ಅಳವಡಿಸಿಕೊಳ್ಳುವ ಅಭ್ಯಾಸಕ್ಕೆ ಇತಿಶ್ರೀ ಹಾಡಬೇಕು ಎಂದು ಪೀಠ ಕಿವಿಮಾತು ಹೇಳಿದೆ.

“ನಾವು ವಿವಿಧ ಹೈಕೋರ್ಟ್‌ಗಳ ಹಲವು ತೀರ್ಪುಗಳನ್ನು ಗಮನಿಸಿದ್ದು ಅನೇಕ ಪ್ರಕರಣಗಳಲ್ಲಿ ಕ್ರಿಮಿನಲ್ ಮೇಲ್ಮನವಿಗಳನ್ನು ಮೊಟಕು ವಿಧಾನ ಅಳವಡಿಸಿಕೊಳ್ಳುವ ಮೂಲಕ ತುರ್ತಾಗಿ ವಿಲೇವಾರಿ ಮಾಡುತ್ತಿರುವುದು ಕಂಡುಬಂದಿದೆ… ಶಾರ್ಟ್‌ಕಟ್‌ಗಳನ್ನು ಅಳವಡಿಸಿಕೊಳ್ಳುವ ಮೂಲಕ ಕ್ರಿಮಿನಲ್ ಮೇಲ್ಮನವಿಗಳನ್ನು ವಿಲೇವಾರಿ ಮಾಡುವ ಇಂತಹ ನಡೆಯನ್ನು ಒಪ್ಪುವುದಿಲ್ಲ” ಎಂದು ನ್ಯಾಯಾಲಯ ತಿಳಿಸಿದೆ.

ಐಪಿಸಿ ಸೆಕ್ಷನ್ 307ರ ಅಡಿ ಕೊಲೆ ಯತ್ನ ಪ್ರಕರಣವೊಂದರ ವಿಚಾರಣೆ 26 ವರ್ಷಗಳಿಂದ ನಡೆಯುತ್ತಿದ್ದು ಆಗ ಯುವಕರಾಗಿದ್ದ ತಾವು ವೃದ್ಧರಾಗಿದ್ದೇವೆ ಹೀಗಾಗಿ ತಮಗೆ ನೀಡಿದ ಶಿಕ್ಷೆಯ ಅವಧಿಯನ್ನು ಕಡಿಮೆಗೊಳಿಸಬೇಕು ಎಂದು ಪ್ರಕರಣದ ಆರೋಪಿಗಳು ರಾಜಸ್ಥಾನ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಯಾವುದೇ ತಾರ್ಕಿಕತೆ ಇಲ್ಲದೆ ಅಥವಾ ಅಪರಾಧದ ಗುರುತ್ವ ಪರಿಗಣಿಸದೆ ಶಿಕ್ಷೆಯನ್ನು ಅವರು ಈಗಾಗಲೇ ಅನುಭವಿಸಿದ ಅವಧಿಗೆ ಹೈಕೋರ್ಟ್‌ ಕಡಿತಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಪ್ರಸ್ತುತ 1,880 ದಿನಗಳಷ್ಟು ತಡವಾಗಿ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದನ್ನು ಸುಪ್ರೀಂ ಕೋರ್ಟ್ ಮನ್ನಿಸಿತು. ಮೂರು ವರ್ಷಗಳಷ್ಟು ಶಿಕ್ಷೆಯನ್ನು ಕೇವಲ ಕೇವಲ 44 ದಿನಗಳಿಗೆ ಕಡಿಮೆ ಮಾಡಿದ ರಾಜಸ್ಥಾನ ಹೈಕೋರ್ಟ್‌ ತೀರ್ಪು ದಾರ್ಷ್ಟ್ಯದಿಂದ ಕೂಡಿದ್ದು ಅದನ್ನು ರದ್ದುಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿತು. 26 ವರ್ಷಗಳ ಕಾಲ ವಿಚಾರಣೆ ನಡೆದಿದೆ ಎಂಬುದು ಕೊಲೆ ಯತ್ನದಂತಹ ಘೋರ ಅಪರಾಧದಲ್ಲಿ ಅಪರಾಧಿಯ ಶಿಕ್ಷೆಯನ್ನು ಕಡಿಮೆ ಮಾಡುವುದಕ್ಕೆ ಏಕೈಕ ಆಧಾರವಾಗುವುದಿಲ್ಲ ಎಂದು ಅದು ತಿಳಿಸಿತು. ಪ್ರಕರಣದ ಸಂತ್ರಸ್ತನಿಗೆ ತೀವ್ರ ಗಾಯಗಳಾಗಿದ್ದು ಅವು ಮಾರಣಾಂತಿಕವಾಗಿದ್ದವು ಎಂದು ವೈದ್ಯರ ವರದಿ ಹೇಳುತ್ತದೆ. ಕನಿಷ್ಠ 10 ವರ್ಷ ಶಿಕ್ಷೆ ವಿಧಿಸಬೇಕಿದ್ದ ಕಡೆ ವಿಚಾರಣಾ ನ್ಯಾಯಾಲಯ ಸೌಮ್ಯ ಧೋರಣೆ ಅನುಸರಿಸಿ ಮೂರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. ಆದ್ದರಿಂದ ಈ ತೀರ್ಪಿನಲ್ಲಿ ಹೈಕೋರ್ಟ್‌ ಮಧ್ಯಪ್ರವೇಶಿಸಬಾರದು” ಎಂದು ಅದು ತಿಳಿಸಿತು.

ಈ ಹಿನ್ನೆಲೆಯಲ್ಲಿ ಸರ್ಕಾರದ ಮೇಲ್ಮನವಿಯನ್ನು ಅಂಗೀಕರಿಸಿದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ತೀರ್ಪನ್ನು ಬದಿಗೆ ಸರಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಊರ್ಜಿತಗೊಳಿಸಿತು. ಪ್ರತಿವಾದಿ ಆರೋಪಿಗಳು ಅಧಿಕಾರಿಗಳೆದುರು ಶರಣಾಗಿ ಉಳಿದ ಜೈಲು ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಿತು.