ನ್ಯೂಯಾರ್ಕ್: ಮಹಿಳಾ ವಿಶ್ವ ಬ್ಲಿಟ್ಜ್ (ಅತಿ ವೇಗದ) ಚೆಸ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್. ವೈಶಾಲಿ, ಕಂಚಿನ ಪದಕ ಗೆದ್ದಿದ್ದಾರೆ.
ವಾಲ್‌ಸ್ಟ್ರೀಟ್‌ನಲ್ಲಿ ನಡೆದ ಟೂರ್ನಿಯಲ್ಲಿ ಸೆಮಿಫೈನಲ್ ನಲ್ಲಿ ಭಾರತದ ವೈಶಾಲಿ, ಚೀನಾದ ಜು ವೆನ್‌ಜುನ್ ವಿರುದ್ಧ 0.5-2.5 ಅಂಕಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.
ಇದರೊಂದಿಗೆ ಫೈನಲ್‌ಗೇರುವ ಅವಕಾಶದಿಂದ ವಂಚಿತರಾದರೂ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೊದಲು ಚೀನಾದವರೇ ಆದ ಝು ಜಿನರ್ ಅವರನ್ನು 2.5-1.5ರ ಅಂಕಗಳ ಅಂತರದಿಂದ ಮಣಿಸಿದ್ದ ವೈಶಾಲಿ, ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ್ದರು.
ಈ ವಿಭಾಗದಲ್ಲಿ ಚೀನಾದ ಲೀ ಟಿಂಗ್ಜಿ ಅವರನ್ನು ಮಣಿಸಿದ ಜು ವೆನ್‌ಜುನ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ವೈಶಾಲಿ ಅಮೋಘ ಸಾಧನೆಗೆ ಅಂತರರಾಷ್ಟ್ರೀಯ ಚೆಸ್ ಫೆಡರೇಷನ್ (ಫಿಡೆ) ಉಪಾಧ್ಯಕ್ಷ, ಐದು ಬಾರಿಯ ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ‘ವೈಶಾಲಿ ಸಾಧನೆಯಲ್ಲಿ ಅತೀವ ಹೆಮ್ಮೆಯಿದೆ’ ಎಂದು ತಿಳಿಸಿದ್ದಾರೆ.
ಇದೀಗಷ್ಟೇ ಮಹಿಳಾ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಕೊನೇರು ಹಂಪಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಆ ಮೂಲಕ 37 ವರ್ಷದ ಕೊನೇರು ಹಂಪಿ ಎರಡನೇ ಸಲ ರ‍್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್ ಗೆದ್ದ ಸಾಧನೆ ಮಾಡಿದ್ದರು.