ಮನೆ ಕಾನೂನು ರೇರಾ ಕಾಯಿದೆ ಜಾರಿಗೂ ಮುನ್ನ ಭಾಗಶಃ ಒಸಿ ಪಡೆದಿದ್ದ ವಸತಿ ಯೋಜನೆ ಮೇಲೆ ರೇರಾ ಪ್ರಾಧಿಕಾರಕ್ಕೆ...

ರೇರಾ ಕಾಯಿದೆ ಜಾರಿಗೂ ಮುನ್ನ ಭಾಗಶಃ ಒಸಿ ಪಡೆದಿದ್ದ ವಸತಿ ಯೋಜನೆ ಮೇಲೆ ರೇರಾ ಪ್ರಾಧಿಕಾರಕ್ಕೆ ಅಧಿಕಾರವಿಲ್ಲ: ಹೈಕೋರ್ಟ್

0

ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ (ರೇರಾ) ಕಾಯಿದೆ ಜಾರಿಗೂ ಮುಂಚಿತವಾಗಿ ಭಾಗಶಃ ಸ್ವಾಧೀನಾನುಭವ ಪತ್ರ (ಒಸಿ) ಪಡೆದಿದ್ದ ವಸತಿ ಯೋಜನೆಗಳ ಮೇಲೆ ರೇರಾ ಪ್ರಾಧಿಕಾರಕ್ಕೆ ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಮೆಸರ್ಸ್ ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.

ಮಂಗಳೂರು ಮೂಲದ ಶ್ಯಾಮ್ ಶೆಟ್ಟಿ ಎಂಬುವರು 2014ರಲ್ಲಿ ಅರ್ಜಿದಾರ ಕಂಪೆನಿಯು ನಿರ್ಮಿಸುವ ಅಪಾರ್ಟ್ಮೆಂಟ್’ನಲ್ಲಿ ಫ್ಲಾಟ್ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದರು. ಬಿಡಿಎ ನೀಡಿದ್ದ ಕಮೆನ್ಸ್ ಮೆಂಟ್ ಸರ್ಟಿಫಿಕೇಟ್ ಆಧರಿಸಿ ಫ್ಲಾಟ್ ಖರೀದಿಗೆ ಅವರು ಮುಂದಾಗಿದ್ದರು. ಬಿಡಿಎ 2015ರ ನವೆಂಬರ್ 18ರಂದು ಭಾಗಶಃ ಒಸಿಯನ್ನು ನೀಡಿತ್ತು. 2017ರಲ್ಲಿ ನಂತರ ಬಿಡಿಎ ಎರಡನೇ ಒಸಿಯನ್ನೂ ನೀಡಿತ್ತು.

ಆದರೆ, ಅಪಾರ್ಟ್’ಮೆಂಟ್ ನಿರ್ಮಾಣವಾಗುತ್ತಿರುವ ಜಾಗದ ಮಾಲೀಕತ್ವವನ್ನು ಅರ್ಜಿದಾರ ಕಂಪೆನಿ ಹೊಂದಿಲ್ಲ ಎಂಬ ಮಾಹಿತಿ ತಿಳಿದು ಫ್ಲಾಟ್ ಖರೀದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಶೆಟ್ಟಿ ಅವರು 2017ರಲ್ಲಿ ರದ್ದುಪಡಿಸಿಕೊಂಡಿದ್ದರು. ಅದರಂತೆ ಕಂಪೆನಿಯು 17.85 ಲಕ್ಷ ರೂಪಾಯಿ ಶೆಟ್ಟಿಗೆ ಹಿಂದಿರುಗಿಸಿತ್ತು. ಆದರೆ, ತಮಗೆ ಇನ್ನೂ 6.84 ಲಕ್ಷ ರೂಪಾಯಿ ಬಡ್ಡಿ ಸಮೇತ ಹಣವನ್ನು ನೀಡಲು ಕಂಪೆನಿಗೆ ಆದೇಶಿಸುವಂತೆ ಕೋರಿ ಶೆಟ್ಟಿ ರೇರಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.

ಆ ಅರ್ಜಿಯನ್ನು ಪುರಸ್ಕರಿಸಿದ್ದ ರೇರಾ ಪ್ರಾಧಿಕಾರವು ಶೆಟ್ಟಿಗೆ 6.84 ಲಕ್ಷ ರೂಪಾಯಿ ಹಣ ಮರುಪಾವತಿಸುವಂತೆ 2020ರ ಸೆಪ್ಟೆಂಬರ್ 30ರಂದು ಆದೇಶಿಸಿತ್ತು. ಆ ಆದೇಶ ರದ್ದು ಕೋರಿ ಅರ್ಜಿದಾರ ಕಂಪೆನಿ ಹೈಕೋರ್ಟ್ ಮೊರೆ ಹೋಗಿತ್ತು. ಇದೀಗ ರೇರಾ ಪ್ರಾಧಿಕಾರದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ರೇರಾ ಕಾಯಿದೆ ಜಾರಿಗೆ ಬರುವ ಮುನ್ನ ಅಂದರೆ 2016ರಲ್ಲಿಯೇ ಒಸಿಯನ್ನು ಅರ್ಜಿದಾರ ಕಂಪೆನಿ ಪಡೆದಿದೆ. ಆದ್ದರಿಂದ, ಪ್ರಗತಿಯಲ್ಲಿರುವ ಕಂಪೆನಿಯ ವಸತಿ ಯೋಜನೆ ರೇರಾ ಕಾಯಿದೆ ವ್ಯಾಪ್ತಿಗೆ ಒಳಪಡುವುದಿಲ್ಲ. ಕಂಪೆನಿ ಮೇಲೆ ರೇರಾ ಪ್ರಾಧಿಕಾರಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ತಿಳಿಸಿ, ಅದರ ಆದೇಶವನ್ನು ರದ್ದುಪಡಿಸಿದೆ.

ಹಿಂದಿನ ಲೇಖನದೆಹಲಿ ಅಪಘಾತ ಪ್ರಕರಣ: ಕಾರು ಮಾಲೀಕನ ಬಂಧನ
ಮುಂದಿನ ಲೇಖನತರಬೇತಿ ವಿಮಾನ ಪತನ: ಪೈಲಟ್ ಸಾವು