ರಾಯಚೂರು: ಡಾ. ಬಿ.ಆರ್. ಅಂಬೇಡ್ಕರ್‌ಗೆ ಅಪಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಯಚೂರು ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಇಂದು ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.
ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಪಾಟೀಲ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ನ್ಯಾಯಾಧೀಶ ಮಲ್ಲಿಕಾರ್ಜುನ ಪಾಟೀಲ್ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ 21 ದಿನಗಳ ಬಳಿಕ ಆಡಳಿತಾತ್ಮಕ ಹಿತದೃಷ್ಟಿಯ ಕಾರಣ ನೀಡಿ ನ್ಯಾಯಾಧೀಶ ಮಲ್ಲಿಕಾರ್ಜುನ ಪಾಟೀಲ್ ಅವರನ್ನು ವರ್ಗಾವಣೆ ಹೈಕೋರ್ಟ್ ರಜಿಸ್ಟರ್ ಟಿ.ಜಿ.ಶಿವಶಂಕರೇಗೌಡ ಆದೇಶ ಹೊರಡಿಸಿದ್ದಾರೆ.
ಘಟನೆ ವಿವರ:
ಜನವರಿ 26ರಂದು ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ, ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಪಾಟೀಲ್ ಅವರು ಅಂಬೇಡ್ಕರ್ ಪೋಟೋ ತೆಗೆದರೆ ಮಾತ್ರ ಧ್ವಜಾರೋಹಣ ಮಾಡುವುದಾಗಿ ಹೇಳಿದ್ದರು. ನ್ಯಾಯಾಧೀಶರ ಈ ನಡೆ ಖಂಡಿಸಿ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಅಲ್ಲದೇ ರಾಜ್ಯಾದ್ಯಂತ ಈಗಲೂ ಸಹ ಪ್ರತಿಭಟನೆಗಳು ನಡೆಯುತ್ತಿವೆ.