ಮನೆ ರಾಜಕೀಯ ರಮೇಶ್ ಜಾರಕಿಹೊಳಿ ತನ್ನ ಅಕ್ರಮ ಮುಚ್ಚಿಕೊಳ್ಳಲು ಡಿಕೆಶಿ ಮೇಲೆ ಆರೋಪ: ಎಂ.ಲಕ್ಷ್ಮಣ್

ರಮೇಶ್ ಜಾರಕಿಹೊಳಿ ತನ್ನ ಅಕ್ರಮ ಮುಚ್ಚಿಕೊಳ್ಳಲು ಡಿಕೆಶಿ ಮೇಲೆ ಆರೋಪ: ಎಂ.ಲಕ್ಷ್ಮಣ್

0

ಮೈಸೂರು: ಬೆಳಗಾವಿ ಜಿಲ್ಲೆ ಗೋಕಾಕ ಕ್ಷೇತ್ರದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಬ್ಯಾಂಕ್‌’ನಲ್ಲಿ ಸಾಲ ಪಡೆದಿರುವುದು ಸೇರಿದಂತೆ ತನ್ನ ಅಕ್ರಮ ಮುಚ್ಚಿಕೊಳ್ಳಲು ಶಿವಕುಮಾರ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಕಿಡಿಕಾರಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಕು ಚಪ್ಪಲಿ ಹಾಕಿಕೊಂಡು ಬಂದ ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಮೂಲಕ ಸಾವಿರಾರು ಕೋಟಿ ರೂಪಾಯಿ ಹಣ ಸಂಪಾದಿಸಿದ್ದಾನೆ ಎಂದು ಆರೋಪಿಸಿರುವ ರಮೇಶ ಜಾರಕಿಹೊಳಿ ತಮ್ಮ ಬೇನಾಮಿ ಆಸ್ತಿ ಕುರಿತ ತನಿಖೆಗೆ ಸಿದ್ಧರಿದ್ದಾರೆಯೇ? ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಕೇಳಿದರು.

ಶಾಲಾ ದಾಖಲಾತಿ ಪ್ರಕಾರ ಅವರ ಹೆಸರು ರಾಮಪ್ಪ ಎಂದಿದೆ. ಆದರೆ, ಹೆಸರು ಬದಲಾವಣೆ ಬಗ್ಗೆ ಎಲ್ಲೂ ಉಲ್ಲೇಖಿಸಿಲ್ಲ. ಸೂಕ್ತ ದಾಖಲೆ ನೀಡಿಲ್ಲ. ಇದು ಬಹುದೊಡ್ಡ ಮೋಸವಾಗಿದೆ. ನಿಯಮದ ಪ್ರಕಾರ, ನ್ಯಾಯಾಲಯದಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳದೇ ತಾವೇ ಬದಲಿಸಿಕೊಂಡಿದ್ದಾರೆ. ಅವರು ಎಸಗಿರುವ ಅಕ್ರಮ, ಅವ್ಯವಹಾರ ಮೊದಲಾದವುಗಳ ಬಗ್ಗೆ ದಾಖಲೆಗಳಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ವಿವಿಧ ಬ್ಯಾಂಕ್‌’ಗಳಲ್ಲಿ ₹ 850 ಕೋಟಿ ಸಾಲ ಮಾಡಿ ತನ್ನ ಸಂಸ್ಥೆಯನ್ನು ದಿವಾಳಿ ಎಂದು ಘೋಷಿಸಿಕೊಂಡಿದ್ದಾರೆ. ಆದರೆ, ಬೆಂಗಳೂರಿನ ಸದಾಶಿವ ನಗರದಲ್ಲಿರುವ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮನೆ ಯಾರದ್ದು? ಜಲಸಂಪನ್ಮೂಲ ಸಚಿವರಾಗಿದ್ದಾಗ ಗುತ್ತಿಗೆದಾರನಿಗೆ ಟೆಂಡರ್ ನೀಡಲು ಮುಂಬೈನಲ್ಲಿ ₹ 100 ಕೋಟಿ ಬೆಲೆಯ ನಿವೇಶನ ಪಡೆದಿದ್ದಾರೆ. ಆ ಗುತ್ತಿಗೆದಾರ ಯಾರು? ಖಾನಾಪುರದಲ್ಲಿ 500 ಎಕರೆ ಬೇನಾಮಿ ಹೆಸರಲ್ಲಿದೆ. ಗೋಕಾಕದಲ್ಲಿ ₹ 30 ಕೋಟಿ ವೆಚ್ಚದಲ್ಲಿ ಮನೆ ಕಟ್ಟುತ್ತಿದ್ದಾರೆ. ಕೆಲ ದಿನಗಳ ಹಿಂದೆ ₹ 4 ಕೋಟಿ ಬೆಲೆ ಬಾಳುವ ಕಾರು ಖರೀದಿಸಿದ್ದಾರೆ. ದಿವಾಳಿಯಾದ ವ್ಯಕ್ತಿ ಬಳಿ ಇಷ್ಟೆಲ್ಲಾ ಆಸ್ತಿ ಇರಲು ಹೇಗೆ ಸಾಧ್ಯ? ಹೀಗಾಗಿ, ಬೇನಾಮಿ ಆಸ್ತಿ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ತನಿಖೆಗೆ ಡಿ.ಕೆ.ಶಿವಕುಮಾರ್‌ ಅವರನ್ನು ನಾನು ಒಪ್ಪಿಸುತ್ತೇನೆ. ರಮೇಶ ಸಿದ್ಧವಿದ್ದಾರೆಯೇ? ಎಂದು ಸವಾಲು ಹಾಕಿದರು.

ಪ್ರಧಾನಿ ನರೇಂದ್ರ ಮೋದಿ ಕಾರಣದಿಂದ ನನಗೆ ಪದ್ಮಭೂಷಣ ಬಂದಿದೆ ಎಂದು ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಹೇಳಿದ್ದಾರೆ. ಸಾಹಿತಿಯಾಗಿ ತಮ್ಮನ್ನು ಗುರುತಿಸಿ ಕೊಟ್ಟಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮುಖಂಡ ಬಿ.ಎಂ.ರಾಮು, ಮಾಧ್ಯಮ ವಕ್ತಾರ ಕೆ.ಮಹೇಶ್, ಸೇವಾ ದಳದ ಗಿರೀಶ್ ಇದ್ದರು.