ಮನೆ ಕಾನೂನು ರಾಮೇಶ್ವರಂ ಕೆಫೆ ಬಾಂಬ್​ ಸ್ಫೋಟ ಪ್ರಕರಣ: ಇಬ್ಬರನ್ನು ವಶಕ್ಕೆ ಪಡೆದ ಎನ್ ಐ ಎ

ರಾಮೇಶ್ವರಂ ಕೆಫೆ ಬಾಂಬ್​ ಸ್ಫೋಟ ಪ್ರಕರಣ: ಇಬ್ಬರನ್ನು ವಶಕ್ಕೆ ಪಡೆದ ಎನ್ ಐ ಎ

0

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಬೆಂಗಳೂರು ಮೂಲದ ಇಬ್ಬರನ್ನು ಶನಿವಾರ (ಮಾ.23) ಸಂಜೆ ವಶಕ್ಕೆ ಪಡೆದುಕೊಂಡಿದ್ದಾರೆ.

 ಈ ಇಬ್ಬರು ಬಾಂಬರ್​ ಜೊತೆ ನೇರ ಸಂಪರ್ಕದಲ್ಲಿದ್ದರು ಎಂಬುವುದು ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಅಧಿಕಾರಿಗಳು ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಮಾರ್ಚ್​ 01 ರಂದು ಬೆಂಗಳೂರಿನ ವೈಟ್ ​ಫಿಲ್ಡ್ ​ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಸಂಭವಿಸಿತ್ತು. ಈ ಪ್ರಕರಣವನ್ನು ಪ್ರಾರಂಭದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದರು. ಬಳಿಕ ಪ್ರಕರಣ ತನಿಖೆಯನ್ನು ಎನ್ ​ಐಎ ಕೈಗೆತ್ತಿಕೊಂಡಿತು. ಪ್ರಕರಣ ತನಿಖೆ ನಡೆಸುತ್ತಿರುವ ಎನ್ ​ಐಎ ಅಧಿಕಾರಿಗಳು, ಆರೋಪಿಯ ಜಾಡು ಹಿಡಿದು ಹೊರಟಿದ್ದಾರೆ. ಪ್ರಕರಣ ಸಂಬಂಧ ಮಾ.13 ರಂದು ಎನ್​ಐಎ ಅಧಿಕಾರಿಗಳು ಬಳ್ಳಾರಿಯಲ್ಲಿ ಶಬ್ಬೀರ್ ಎಂಬಾತನನ್ನು ಬಂಧಿಸಿದ್ದರು.

ಬಾಂಬರ್​ ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಪರಾರಿಯಾಗಿದ್ದಾನೆ. ಸ್ಫೋಟಕ್ಕೂ ಮುನ್ನ ಆರೋಪಿ ಎರಡು ತಿಂಗಳು ತಮಿಳುನಾಡಿನಲ್ಲಿದ್ದನು. ಬಾಂಬ್​ ಸ್ಫೋಟಗೊಂಡ ದಿನ ಶಂಕಿತ ಉಗ್ರ ಧರಿಸಿದ್ದ 10 ನಂಬರ್  ಅಂತ ಬರೆದಿದ್ದ ಬ್ರ್ಯಾಂಡೆಡ್ ಕ್ಯಾಪ್ ​ನ​ ಜಾಡು ಹಿಡಿದು ಎನ್ ​ಐಎ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಆಗ ಕೆಫೆಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಧಾರ್ಮಿಕ ಸ್ಥಳದ ಬಳಿ ಶಂಕಿತ ಉಗ್ರ ಟೋಪಿಯನ್ನು ಬಿಟ್ಟು ಶರ್ಟ್​ ಅನ್ನು ತೆಗೆದು, ರೌಂಡ್-ನೆಕ್ ಟೀ ಶರ್ಟ್‌ ಹಾಕಿಕೊಂಡು ಅಲ್ಲಿಂದ ತೆರಳಿರುವುದು ತಿಳಿದಿದೆ. ಕೂಡಲೆ ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಟೋಪಿಯಲ್ಲಿ ಸಿಕ್ಕ ಕೂದಲು ಮಾದರಿಯನ್ನು ಸಂಗ್ರಹ ಮಾಡಲಾಗಿದ್ದು, ಡಿಎನ್​ಎ ಪರೀಕ್ಷೆಗೆ ಕಳುಹಿಸಲಾಗಿದೆ. ಇದು ಶಂಕಿತನ ಕುಟುಂಬ ಸದಸ್ಯರನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.