ಮಂಡ್ಯ:- ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ 20 ವರ್ಷ ಶಿಕ್ಷೆ ವಿಧಿಸಿ ನಗರದ ನ್ಯಾಯಲಯ ಆದೇಶ ಮಾಡಿದೆ.
ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ಬಿದರಕರೆ ಗ್ರಾಮದ ರವಿ(35)ಶಿಕ್ಷೆಗೆ ಒಳಗಾದ ಆರೋಪಿ.ಕಳೆದ 2019 ಸಾಲಿನಲ್ಲಿ ಅದೇ ಗ್ರಾಮದ 5 ವರ್ಷದ ಅಪ್ರಾಪ್ತ ಬಾಲಕಿಯನ್ನು ಬಾ ನಮ್ಮ ಹೊಲದ ಕಡೆ ತಿರುಗಾಡಿಕೊಂಡು ಬರೋಣವೆಂದು ಸ್ಕೂಟರ್ನಲ್ಲಿ ಲಾಳನಕೆರೆ ಕಡೆಗೆ ಕರೆದುಕೊಂಡು ಯಾವುದೋ ಕಲ್ಲು ಬಂಡೆಯ ಬಳಿಯ ಜಮೀನಿನ ಹತ್ತಿರ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿ,ಯಾರಿಗಾದರೂ ಹೇಳಿದರೆ ಹೊಡೆಯುತ್ತೇನೆಂದು ಬೆದರಿಕೆ ಹಾಕಿದ್ದರು.
ಈ ಕುರಿತು ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ನಂಜಪ್ಪ ಅವರು ದೋಷರೋಪಣಾ ಪತ್ರ ಸಲ್ಲಿಸಿದರು. ಈ ಕುರಿತು ವಿಚಾರಣೆ ನಡೆಸಿದ ಮಂಡ್ಯ ಅಧಿಕ ಸತ್ರ ಮತ್ತು ತ್ವರಿತಗತಿ 2ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಕೆ.ಎ ನಾಗಜ್ಯೋತಿ ಅವರು ಆರೋಪಿಗೆ ಐಪಿಸಿ ಅಡಿ ಅಪರಾಧಕ್ಕೆ 20 ವರ್ಷ ಸಜೆ ಮತ್ತು 50 ಸಾವಿರ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 5 ವರ್ಷಗಳ ಸಾದಾ ಶಿಕ್ಷೆ ಹಾಗೂ ಐಪಿಸಿ ಕಲಂ 366 ಅಡಿಯಲ್ಲಿನ ಅಪರಾಧಕ್ಕೆ 2 ವರ್ಷಗಳ ಶಿಕ್ಷೆ ಮತ್ತು25 ಸಾವಿರ ರೂ.ಗಳ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 6 ತಿಂಗಳು ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ಅವರು ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.