ಮನೆ ಸುದ್ದಿ ಜಾಲ ಟಿಂಡರ್ ಮಾದರಿಯಲ್ಲಿ ಕೆಲಸ ಮಾಡುವ ‘ರಸ್ತೆ’ ಆ್ಯಪ್ ವೈರಲ್: ಬೆಂಗಳೂರಿನ 14 ವರ್ಷದ ಬಾಲಕನ ಐಡಿಯಾಗೆ ಭಾರಿ...

ಟಿಂಡರ್ ಮಾದರಿಯಲ್ಲಿ ಕೆಲಸ ಮಾಡುವ ‘ರಸ್ತೆ’ ಆ್ಯಪ್ ವೈರಲ್: ಬೆಂಗಳೂರಿನ 14 ವರ್ಷದ ಬಾಲಕನ ಐಡಿಯಾಗೆ ಭಾರಿ ಮೆಚ್ಚುಗೆ

0

ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು, ಹಾಳಾದ ಫುಟ್ಪಾತ್ಗಳು, ಪಾದಚಾರಿಗಳಿಗೆ ಸರಿಯಾದ ವ್ಯವಸ್ಥೆಯ ಕೊರತೆ ಹಾಗೂ ಟ್ರಾಫಿಕ್ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸಾರ್ವಜನಿಕರು ಹಲವು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೂ, ಸಮಸ್ಯೆಗಳ ನಿವಾರಣೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಾಣಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬೆಂಗಳೂರಿನ 14 ವರ್ಷದ ಬಾಲಕ ಸೂರ್ಯ ಉತ್ಕರ್ಷ ಅಭಿವೃದ್ಧಿಪಡಿಸಿರುವ ‘ರಸ್ತೆ’ (RASTHE) ಎಂಬ ಹೊಸ ಆ್ಯಪ್ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.

ಪ್ರಸಿದ್ಧ ಡೇಟಿಂಗ್ ಆ್ಯಪ್ ‘ಟಿಂಡರ್’ ಮಾದರಿಯಲ್ಲಿ ಕಾರ್ಯ ನಿರ್ವಹಿಸುವ ಈ ಆ್ಯಪ್ ಮೂಲಕ ನಾಗರಿಕರು ನಗರದ ರಸ್ತೆ ಹಾಗೂ ಫುಟ್ಪಾತ್ ಸಮಸ್ಯೆಗಳನ್ನು ಸುಲಭವಾಗಿ ವರದಿ ಮಾಡಬಹುದು. ಸೂರ್ಯ ಉತ್ಕರ್ಷ ತನ್ನ ಎಕ್ಸ್ ಖಾತೆಯಲ್ಲಿ ಈ ಆ್ಯಪ್ ಕುರಿತು ವಿಡಿಯೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದು ವೇಗವಾಗಿ ವೈರಲ್ ಆಗಿದೆ. ಯುವ ಬಾಲಕನ ಸಾಮಾಜಿಕ ಕಾಳಜಿ ಹಾಗೂ ತಾಂತ್ರಿಕ ಆಲೋಚನೆಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

‘ರಸ್ತೆ’ ಆ್ಯಪ್ ವಿಶೇಷತೆ ಏನು?

‘ರಸ್ತೆ’ ಆ್ಯಪ್ ಸಾಮಾನ್ಯ ದೂರು ಸಲ್ಲಿಕೆ ವ್ಯವಸ್ಥೆಯಂತಿಲ್ಲ. ಇದು ಯುವಜನತೆ ಹೆಚ್ಚು ಬಳಸುವ ಟಿಂಡರ್ ಆ್ಯಪ್ನ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಬಳಕೆದಾರರು ತಮ್ಮ ಸುತ್ತಮುತ್ತಲಿನ ರಸ್ತೆಗಳು ಅಥವಾ ಫುಟ್ಪಾತ್ಗಳ ಫೋಟೋಗಳನ್ನು ತೆಗೆದು ಆ್ಯಪ್ನಲ್ಲಿ ಅಪ್ಲೋಡ್ ಮಾಡಬಹುದು.

ಒಂದು ರಸ್ತೆ ಅಥವಾ ಫುಟ್ಪಾತ್ ಉತ್ತಮ ಸ್ಥಿತಿಯಲ್ಲಿ ಇದ್ದರೆ ಬಳಕೆದಾರರು ರೈಟ್ ಸ್ವೈಪ್ ಮಾಡಬಹುದು. ರಸ್ತೆ ಹಾಳಾಗಿದ್ದರೆ, ಫುಟ್ಪಾತ್ ಒಡೆದಿದ್ದರೆ ಅಥವಾ ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದ್ದರೆ ಲೆಫ್ಟ್ ಸ್ವೈಪ್ ಮಾಡುವ ಅವಕಾಶ ಇದೆ. ಇದೇ ವೈಶಿಷ್ಟ್ಯದಿಂದಾಗಿ ನೆಟ್ಟಿಗರು ಈ ಆ್ಯಪ್ ಅನ್ನು “ಫುಟ್ಪಾತ್ ಗಳ ಟಿಂಡರ್” ಎಂದು ಕರೆಯುತ್ತಿದ್ದಾರೆ.

ಕೇವಲ 30 ನಿಮಿಷಗಳಲ್ಲಿ ಸಿದ್ಧವಾದ ಆ್ಯಪ್

ಸೂರ್ಯ ಉತ್ಕರ್ಷ ತನ್ನ ಪೋಸ್ಟ್‌ನಲ್ಲಿ ಈ ಆ್ಯಪ್ ಅನ್ನು ಕೇವಲ 30 ನಿಮಿಷಗಳಲ್ಲಿ ನಿರ್ಮಿಸಿರುವುದಾಗಿ ಹೇಳಿದ್ದಾನೆ. ‘10x Apps’ ಎಂಬ ಪ್ಲಾಟ್ಫಾರ್ಮ್ ಬಳಸಿಕೊಂಡು ಈ ಆ್ಯಪ್ ಸಿದ್ಧಪಡಿಸಲಾಗಿದೆ ಎಂದು ಆತ ವಿವರಿಸಿದ್ದಾನೆ.

“ನಾನು ಬೆಂಗಳೂರಿನ ಟ್ರಾಫಿಕ್ ಮತ್ತು ರಸ್ತೆ ಸಮಸ್ಯೆಗಳನ್ನು 30 ನಿಮಿಷಗಳಲ್ಲಿ ಫಿಕ್ಸ್ ಮಾಡಿದ್ದೇನೆ” ಎಂದು ಬರೆದುಕೊಂಡಿರುವ ಆತನ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಜನರ ಗಮನ ಸೆಳೆದಿದೆ. ಹಲವರು ಬಾಲಕನ ಪ್ರತಿಭೆಯನ್ನು ಮೆಚ್ಚಿಕೊಂಡು, ಇಂತಹ ಹೊಸ ಆಲೋಚನೆಗಳನ್ನು ಸರ್ಕಾರಗಳು ಗಮನಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಆ್ಯಪ್ನ ಮತ್ತೊಂದು ಪ್ರಮುಖ ವೈಶಿಷ್ಟ್ಯ ಜಿಯೋ-ಟ್ಯಾಗಿಂಗ್ ವ್ಯವಸ್ಥೆ. ನಾಗರಿಕರು ಅಪ್ಲೋಡ್ ಮಾಡುವ ಫೋಟೋಗಳು ಸ್ವಯಂಚಾಲಿತವಾಗಿ ಸಂಬಂಧಿತ ಪ್ರದೇಶ ಹಾಗೂ ವಾರ್ಡ್ ಗೆ ಮ್ಯಾಪ್ ಆಗುತ್ತವೆ. ಇದರಿಂದ ಬಿಬಿಎಂಪಿ ಅಧಿಕಾರಿಗಳಿಗೆ ಯಾವ ಭಾಗದಲ್ಲಿ ರಸ್ತೆ ಅಥವಾ ಫುಟ್ಪಾತ್ ಸಮಸ್ಯೆ ಇದೆ ಎಂಬುದು ಸುಲಭವಾಗಿ ತಿಳಿಯಬಹುದು.

ಫುಟ್ಪಾತ್ ಒಡೆದಿರುವುದು, ಕಲ್ಲುಗಳು ಕಿತ್ತು ಹೋಗಿರುವುದು, ರಸ್ತೆ ಬದಿಯಲ್ಲಿ ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ನಾಗರಿಕರು ನೇರವಾಗಿ ವರದಿ ಮಾಡಬಹುದು. ಈ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ನಾಗರಿಕರೇ ನಗರದ ಸೆನ್ಸರ್ ಗಳು

ಸೂರ್ಯ ಉತ್ಕರ್ಷ ತನ್ನ ಆ್ಯಪ್ ಕುರಿತು ಮಾತನಾಡುವ ವೇಳೆ, “ರಸ್ತೆಗಳು ಕಾರುಗಳಿಗಾಗಿ ನಿರ್ಮಾಣವಾಗುತ್ತವೆ. ಆದರೆ ಈ ಆ್ಯಪ್ ಜನರಿಗಾಗಿ ಮಾಡಲಾಗಿದೆ” ಎಂದು ಹೇಳಿದ್ದಾನೆ. ಉತ್ತಮ ಫುಟ್ಪಾತ್ ವ್ಯವಸ್ಥೆ ಇದ್ದರೆ ಜನರು ರಸ್ತೆಯಲ್ಲಿ ನಡೆಯುವ ಅಗತ್ಯ ಕಡಿಮೆಯಾಗುತ್ತದೆ. ಇದರಿಂದ ಟ್ರಾಫಿಕ್ ಸಮಸ್ಯೆಯೂ ಕೆಲವು ಮಟ್ಟಿಗೆ ನಿಯಂತ್ರಣಕ್ಕೆ ಬರಬಹುದು ಎಂಬುದು ಆತನ ಅಭಿಪ್ರಾಯವಾಗಿದೆ.

ನಗರದ ಪ್ರತಿಯೊಬ್ಬ ನಾಗರಿಕನನ್ನೂ ನಗರದ ಸಮಸ್ಯೆಗಳನ್ನು ಗುರುತಿಸುವ ‘ಸೆನ್ಸರ್’ ಆಗಿ ರೂಪಿಸುವುದು ಈ ಆ್ಯಪ್ನ ಮುಖ್ಯ ಉದ್ದೇಶ ಎಂದು ಆತ ತಿಳಿಸಿದ್ದಾನೆ.

ನೆಟ್ಟಿಗರಿಂದ ಭಾರಿ ಮೆಚ್ಚುಗೆ

ಸದ್ಯ ‘ರಸ್ತೆ’ ಆ್ಯಪ್ ಅನ್ನು ಆ್ಯಪ್ ಸ್ಟೋರ್ ಗಳಿಗೆ ಬಿಡುಗಡೆ ಮಾಡಲು ಸೂರ್ಯ ಉತ್ಕರ್ಷ ಸಿದ್ಧತೆ ನಡೆಸುತ್ತಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಐಡಿಯಾಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಹಲವರು ಇದನ್ನು ಬಿಬಿಎಂಪಿಯ ‘ಸಹಾಯ’ ಆ್ಯಪ್ಗಿಂತ ಹೆಚ್ಚು ಜನಸ್ನೇಹಿ ಮತ್ತು ಬಳಕೆ ಸುಲಭವಾದ ವ್ಯವಸ್ಥೆ ಎಂದು ಕೊಂಡಾಡುತ್ತಿದ್ದಾರೆ.

ಯುವ ವಯಸ್ಸಿನಲ್ಲೇ ಸಾಮಾಜಿಕ ಸಮಸ್ಯೆಗೆ ತಂತ್ರಜ್ಞಾನದ ಮೂಲಕ ಪರಿಹಾರ ಹುಡುಕಿರುವ ಸೂರ್ಯ ಉತ್ಕರ್ಷನ ಪ್ರಯತ್ನ ಇದೀಗ ಬೆಂಗಳೂರಿಗರ ಗಮನ ಸೆಳೆದಿದ್ದು, ಭವಿಷ್ಯದಲ್ಲಿ ಇಂತಹ ಹೊಸ ಆ್ಯಪ್ಗಳು ನಗರ ಆಡಳಿತಕ್ಕೆ ಸಹಾಯಕವಾಗಬಹುದು ಎಂಬ ಚರ್ಚೆ ಆರಂಭವಾಗಿದೆ.