ಬೆಂಗಳೂರು: ಇಂದು ಸಿಲಿಕಾನ್ ಸಿಟಿಯಲ್ಲಿ 545 ಮಂದಿ ಪಿಎಸ್ಐ ನೇಮಕಾತಿಗಾಗಿ ಮರು ಪರೀಕ್ಷೆ ನಡೆಯುತ್ತಿದೆ. 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಪ್ರವೇಶ ಪತ್ರ ಪಡೆದಿದ್ದು, ಯಾವುದೇ ಲೋಪವಾಗದಂತೆ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಐ) ವಹಿಸಲಾಗಿದೆ.
ಅದರಂತೆ ಪಿಎಸ್ ಐ ಪರೀಕ್ಷೆಯನ್ನು ಇಂದು ಬೆಂಗಳೂರಿನಲ್ಲಿ ಕೆಇಐ ಕಟ್ಟೆಚ್ಚರ ವಹಿಸಿ ನಡೆಸುತ್ತಿದೆ. ಇದಕ್ಕೆ ಬೆಂಗಳೂರು ಪೊಲೀಸರು ಕಟ್ಟುನಿಟ್ಟಿನ ಭದ್ರತೆ ಒದಗಿಸಿದೆ. ಇನ್ನು ಪರೀಕ್ಷಾ ಪ್ರಾಧಿಕಾರವು ಪಿಎಸ್ಐ ಪರೀಕ್ಷೆಗೆ ವಸ್ತ್ರಸಂಹಿತೆ ಜಾರಿಗೊಳಿಸಿದ್ದು, ಪರೀಕ್ಷಾ ಕೇಂದ್ರಕ್ಕೆ ಕೆಲವು ವಸ್ತುಗಳಿಗೆ ನಿಷೇಧ ಜಾರಿ ಮಾಡಿದೆ.
ಈಗಾಗಲೇ ಹಗರಣದಲ್ಲಿ ಸಿಲುಕಿ ರಂಪ ರಾಡಿ ಮಾಡಿಕೊಂಡಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸುವಂತೆ ಹೈಕೋರ್ಟ್ ಆದೇಶಿಸಿರುವ ಹಿನ್ನೆಲೆ ಇಂದು ನಗರದಲ್ಲಿ ಮರು ಪರೀಕ್ಷೆ ನಡೆಯುತ್ತಿದೆ. ಬೆಂಗಳೂರಿನ 117 ಪರೀಕ್ಷಾ ಕೇಂದ್ರಗಳಲ್ಲಿ ಪಿಎಸ್ ಐ ನೇಮಕಾತಿಗೆ ಮರು ಪರೀಕ್ಷೆ ಎರಡು ವಿಷಯಗಳಿಗೆ ನಡೆಯುತ್ತಿದೆ. ಬೆಳಿಗ್ಗೆ 10.30 ರಿಂದ 12 ಮಧ್ಯಾಹ್ನನದವರೆಗೆ ಪೇಪರ್ 1 ಗೆ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಗೆ 50 ಅಂಕಗಳನ್ನು ನಿಗದಿ ಮಾಡಲಾಗಿದೆ. ಮಧ್ಯಾಹ್ನ 1ರಿಂದ ಮಧ್ಯಾಹ್ನ 2.30 ರವರೆಗೆ ಪೇಪರ್ 2ಕ್ಕೆ ಪರೀಕ್ಷೆ ನಡೆಯಲಿದ್ದು 150 ಅಂಕಗಳನ್ನು ನಿಗದಿಪಡಿಸಲಾಗಿದೆ.
ಪರೀಕ್ಷಾ ಕೇಂದ್ರದ ಸುತ್ತಮುತ್ತಲ 200 ಮೀಟರ್ ಪ್ರದೇಶವನ್ನು ನಿಷೇಧಿತ ಸ್ಥಳವೆಂದು ಘೋಷಿಸಲಾಗಿದೆ. ಪಿಎ ಸ್ಐ ಪರೀಕ್ಷೆಗೆ ಡ್ರೆಸ್ ಕೋಡ್ ಜಾರಿಯಾಗಿದೆ. ಪುರುಷ ಅಭ್ಯರ್ಥಿಗಳು ಅರೆತೋಳಿನ ಅಂಗಿ, ಹೆಚ್ಚಿನ ಜೇಬುಗಳಿಲ್ಲದ ಸರಳ ಪ್ಯಾಂಟ್ ಕಡ್ಡಾಯವಾಗಿದೆ. ಇದರ ಭಾಗವಾಗಿ ಜಿಪ್ ಪಾಕೆಟ್, ದೊಡ್ಡ ಬಟನ್ಸ್ ಮತ್ತು ವಿಸ್ತಾರದ ಕಸೂತಿ ಇರುವ ಉಡುಪು ಮತ್ತು ಶೂಗಳನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಯಾವುದೇ ಕಂಠಾಭರಣ, ಕಿವಿಯೋಲೆ, ಉಂಗುರ ಮತ್ತು ಕಡಗಗಳನ್ನು ಧರಿಸಿಕೊಂಡು ಬರಬಾರದು.
ಹಾಗೆಯೇ ಮಹಿಳಾ ಅಭ್ಯರ್ಥಿಗಳಿಗೆ ವಿಪರೀತ ಕಸೂತಿ, ಹೂಗಳು, ಬ್ರೂಚ್, ಬಟನ್, ಪೂರ್ಣ ತೋಳಿನ ರವಿಕೆ/ವಸ್ತ್ರ ಇರುವ ಉಡುಪು ಮತ್ತು ಜೀನ್ಸ್ ಪ್ಯಾಂಟ್ ಹಾಗೂ ದಪ್ಪನೆ ಅಡಿಭಾಗವಿರುವ ಚಪ್ಪಲಿ/ಶೂಗಳನ್ನು ಧರಿಸಿಕೊಂಡು ಬರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ, ಬೇರಾವುದೇ ಆಭರಣಗಳನ್ನು ಹಾಕಿಕೊಂಡು ಪರೀಕ್ಷಾ ಕೇಂದ್ರಕ್ಕೆ ಬರುವಂತಿಲ್ಲ ಎಂದು ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಇದರ ಹೊರತಾಗಿಯೂ ಜೀನ್ಸ್ ಹಾಗೂ ಫುಲ್ ತೋಳಿನ ಶರ್ಟ್ ಹಾಕಿದವರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ನಿರಾಕರಣೆ ಮಾಡಲಾಗಿದೆ.
ಈ ಬಾರಿ ಗುಲ್ಬರ್ಗ, ರಾಯಚೂರು ಭಾಗದ ಶಿಕ್ಷಕರನ್ನ ಪರೀಕ್ಷೆಗೆ ಬಳಕೆ ಮಾಡಿಲ್ಲ. ಆ ಭಾಗದಲ್ಲಿ ಪರೀಕ್ಷಾ ಅಕ್ರಮ ನಡೆದ ಕಾರಣ ಶಿಕ್ಷಕರ ಬಳಕೆಯೂ ನಿಷೇಧ ಮಾಡಲಾಗಿದೆ. ಕೇವಲ ಮಂಡ್ಯ, ಮೈಸೂರು, ತುಮಕೂರು, ದಾವಣಗೆರೆ ಭಾಗದ ಶಿಕ್ಷಕರು ಮಾತ್ರ ಪರೀಕ್ಷಾ ಸೇವೆಯಲ್ಲಿ ತೊಡಗಿದ್ದಾರೆ.
ಯಾವುದೇ ರೀತಿಯಾದ ಅಹಾರ, ನೀರಿನ ಬಾಟಲಿಗೆ ಅವಕಾಶ ಇಲ್ಲ. ಪರೀಕ್ಷಾ ಕೇಂದ್ರದಲ್ಲಿಯೇ ನೀರು ಕುಡಿಯಲು ವ್ಯವಸ್ಥೆ ಮಾಡಲಾಗಿದೆ. ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್, ಲಾಗ್ ಟೇಬಲ್ ಗಳು ಪರೀಕ್ಷಾ ಕೇಂದ್ರಕ್ಕೆ ನಿಷೇಧ ವಿಧಿಸಲಾಗಿದೆ. ಎಲ್ಲಾ ಅಭ್ಯರ್ಥಿಗಳಿಗೆ ಹ್ಯಾಟ್ ಧರಿಸದಂತೆ ಮತ್ತು ಎಲ್ಲರಿಗೂ ಮಾಸ್ಕ್ ಧರಿಸದಂತೆ ಸೂಚನೆ ನೀಡಲಾಗಿದೆ.
ಪ್ರವೇಶ ಪತ್ರ ಕಡ್ಡಾಯವಾಗಿ ತರಲು ಸೂಚನೆ. ಸರ್ಕಾರದಿಂದ ಮಾನ್ಯವಾದ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಕೊನೆಯ ಬೆಲ್ ಹೊಡೆಯೋವರೆಗೂ ಪರೀಕ್ಷಾ ಹಾಲ್ ನಿಂದ ಅಭ್ಯರ್ಥಿಗಳು ಹೊರ ಹೋಗುವಂತಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದೇಶಿಸಿದೆ.