ದಿ ಕೇರಳ ಸ್ಟೋರಿ.. ಸದ್ಯ ದೇಶದಲ್ಲಿ ಈ ಸಿನಿಮಾ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಸಿನಿಮಾದಲ್ಲಿ ಅತಿರೇಕ ಮಾಡಲಾಗಿದೆ, ಉತ್ಪ್ರೇಕ್ಷೆ ಮಾಡಲಾಗಿದೆ ಅನ್ನೋದು ಕೆಲವರ ವಾದವಾದ್ರೆ, ಮತ್ತೆ ಕೆಲವರು ಕೇರಳ ಸ್ಟೋರಿಯಲ್ಲಿ ಸತ್ಯದ ಅನಾವರಣ ಆಗ್ತಿದೆ ಎನ್ನುತ್ತಿದ್ದಾರೆ. ಕೆಲವು ರಾಜ್ಯಗಳು ಕೇರಳ ಸ್ಟೋರಿ ಸಿನಿಮಾವನ್ನು ಟ್ಯಾಕ್ಸ್ ಫ್ರೀ ಮಾಡಿವೆ, ಇನ್ನು ಕೆಲವು ರಾಜ್ಯಗಳು ನಿಷೇಧ ಹೇರಿವೆ.. ಬಿಜೆಪಿ ನಾಯಕರಂತೂ ಹೆಣ್ಣೆತ್ತವರು ನೋಡಲೇ ಬೇಕಾದ ಸಿನಿಮಾ ಇದು ಎನ್ನುತ್ತಿದ್ದಾರೆ.
‘ದಿ ಕೇರಳ ಸ್ಟೋರಿ’ ಅಸಲಿಯತ್ತೇನು?
ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಏನಿದೆ ಅನ್ನೋದನ್ನ ಇದ್ದಿದ್ದು ಇದ್ದ ಹಾಗೆ ಹೇಳೋದಾದ್ರೆ, ಕೇರಳ ರಾಜ್ಯದಲ್ಲಿ ಅನ್ಯಧರ್ಮೀಯ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗುತ್ತಿದೆ ಅನ್ನೋದು ದಿ ಕೇರಳ ಸ್ಟೋರಿಯ ಒನ್ ಲೈನ್ ಸ್ಟೋರಿ. ಇದು ಕೇವಲ ಮತಾಂತರ ಮಾತ್ರವಲ್ಲ, ಮತಾಂತರದ ಹೆಸರಲ್ಲಿ ಯುವತಿಯರು ಅನುಭವಿಸುವ ದೌರ್ಜನ್ಯಗಳನ್ನ ಎಳೆ ಎಳೆಯಾಗಿ ಸಿನಿಮಾದಲ್ಲಿ ಬಿಂಬಿಸಲಾಗಿದೆ. ಒತ್ತಾಯ, ಆಮಿಷ, ಮೋಸದಿಂದ ಮತಾಂತರ ಮಾಡಲಾಗ್ತಿದೆ. ಮತಾಂತರದ ಬಳಿಕ ಯುವತಿಯರನ್ನು ಸಿರಿಯಾಗೆ ಕಳಿಸಲಾಗುತ್ತಿದೆ. ಅಲ್ಲಿ ಮತಾಂಧ ಉಗ್ರರ ಕೈಗೆ ಸಿಕ್ಕು ಯುವತಿಯರು ಹೇಗೆಲ್ಲಾ ನರಳುತ್ತಾರೆ ಅನ್ನೋದನ್ನ ದಿ ಕೇರಳ ಸ್ಟೋರಿ ವಿವರಿಸಿದೆ. ಈ ರೀತಿಯ ಲೆಕ್ಕವಿಲ್ಲದಷ್ಟು ಪ್ರಕರಣಗಳು ಕೇರಳದಲ್ಲಿ ನಡೆದಿದ್ದು, ಸಿನಿಮಾದಲ್ಲಿ ಕೇವಲ 4 ಜನರನ್ನು ಉದಾಹರಣೆಯಾಗಿ ತೋರಿಸಲಾಗಿದೆ ಅನ್ನೋದು ಸಿನಿಮಾ ನಿರ್ಮಾಣ ಮಾಡಿದ ತಂಡದ ವಾದ. ಚಿತ್ರದ ಕೊನೆಯಲ್ಲಿ ನಿಜ ಜೀವನದಲ್ಲಿ ಈ ರೀತಿಯ ಹಿಂಸೆ ಅನುಭವಿಸಿದವರು ಎನ್ನಲಾದ ವ್ಯಕ್ತಿಗಳನ್ನೂ ತೋರಿಸಲಾಗಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರ ಮೇಲಾದ ದೌರ್ಜನ್ಯಗಳನ್ನ ಬಿಂಬಿಸಿದ್ದರೆ, ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಲವ್ ಜಿಹಾದ್‌ನ ಎಲ್ಲಾ ಆಯಾಮಗಳನ್ನೂ ಸಚಿತ್ರವಾಗಿ ತೋರಿಸಲಾಗಿದೆ. ಸಿನಿಮಾದಲ್ಲಿ ಪ್ರಾತಿನಿಧಿಕವಾಗಿ ನಾಲ್ವರು ಯುವತಿಯರನ್ನು ಬಿಂಬಿಸಲಾಗಿದೆ. ಅಸಲಿಗೆ ಎಷ್ಟು ಯುವತಿಯರು ಹಿಂಸೆ, ದೌರ್ಜನ್ಯ ಅನುಭವಿಸಿದರು ಅನ್ನೋ ವಿವರ ಇಲ್ಲ, ಸಾಕ್ಷ್ಯಗಳೂ ಇಲ್ಲ.
ದಿ ಕೇರಳ ಸ್ಟೋರಿ ಸಿನಿಮಾದ ಟ್ರೇಲರ್‌ನಲ್ಲಿ ಹೇಳಿರುವಂತೆ ಕೇರಳದಲ್ಲಿ 32 ಸಾವಿರ ಯುವತಿಯರ ಮತಾಂತರ ಆಗಿರುವ ಸಾಕ್ಷ್ಯ ಕೊಡಲಿ ನಾನು ಅವರಿಗೆ ಬಹುಮಾನ ಕೊಡುವೆ ಅಂತಾ ಕೇರಳ ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಹಿಂದೆ ಸವಾಲು ಹಾಕಿದ್ದರು. ಈ ಬಗ್ಗೆ ಸಿನಿಮಾದಲ್ಲೇ ಸ್ಪಷ್ಟನೆ ನೀಡಲಾಗಿದ್ದು, 32 ಸಾವಿರ ಯುವತಿಯರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಇತ್ತ, ಕೇರಳದ ಆಡಳಿತಾರೂಢ ಎಲ್‌ಡಿಎಫ್ ಕೂಡಾ ಈ ಸಿನಿಮಾವನ್ನ ವಿರೋಧಿಸಿದೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಆಡಳಿತಾರೂಢ ಟಿಎಂಸಿ ಸರ್ಕಾರ ದಿ ಕೇರಳ ಸ್ಟೋರಿ ಸಿನಿಮಾಗೆ ನಿಷೇಧವನ್ನೇ ಹೇರಿದೆ. ಈ ಚಿತ್ರದಲ್ಲಿ ಕಥೆಯನ್ನು ತಿರುಚಲಾಗಿದೆ ಅನ್ನೋದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾದ. ದ್ವೇಷ ಮತ್ತು ಹಿಂಸಾಚಾರವನ್ನು ತಡೆಯಲು ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡೋದಕ್ಕಾಗಿ ತಮ್ಮ ಸರ್ಕಾರ ಕೇರಳ ಸ್ಟೋರಿ ಚಿತ್ರಕ್ಕೆ ನಿಷೇಧ ಹೇರಿದೆ ಅನ್ನೋದು ಮಮತಾ ಬ್ಯಾನರ್ಜಿ ಸಮರ್ಥನೆ. ಇದೇ ಪರಿಸ್ಥಿತಿ ತಮಿಳುನಾಡಿನಲ್ಲೂ ಇದೆ. ಆದ್ರೆ, ಇಲ್ಲಿನ ಸರ್ಕಾರ ಅಧಿಕೃತವಾಗಿ ಸಿನಿಮಾಗೆ ನಿಷೇಧ ಹೇರಿಲ್ಲ. ಬದಲಾಗಿ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ಮಾಲೀಕರೆ ಈ ಸಿನಿಮಾ ಪ್ರದರ್ಶನ ಮಾಡದೇ ಇರೋದಕ್ಕೆ ತೀರ್ಮಾನ ಮಾಡಿದ್ದಾರೆ. ಇನ್ನೊಂದೆಡೆ ಪ್ರತಿಭಟನೆಗಳೂ ನಡೆದಿವೆ, ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲೂ ಸದ್ದು ಮಾಡಿದೆ. ಸಿನಿಮಾ ನಿರ್ಮಾಣ ಮಾಡಿದ ತಂಡವು ಸುಳ್ಳು ಹೇಳ್ತಿದೆ. ಇಲ್ಲಸಲ್ಲದ ವಿಚಾರಗಳನ್ನು ಬಿಂಬಿಸುತ್ತಿದೆ ಅನ್ನೋದು ವಿರೋಧಿಗಳ ವಾದ. ಹಾಗಾದ್ರೆ ಕೇರಳದಲ್ಲಿ ಲವ್ ಜಿಹಾದ್ ನಡೆದೇ ಇಲ್ಲವೇ? ಯಾವೊಬ್ಬ ಅನ್ಯ ಧರ್ಮೀಯ ಮಹಿಳೆಯೂ ಹಿಂಸೆ, ದೌರ್ಜನ್ಯ ಅನುಭವಿಸಿಲ್ಲವೇ? ಈ ಪ್ರಶ್ನೆಗೆ ಸಾಕ್ಷ್ಯ ಸಮೇತ ಯಾರ ಬಳಿಯೂ ಉತ್ತರ ಇಲ್ಲ.
ದಿ ಕೇರಳ ಸ್ಟೋರಿ ಸಿನಿಮಾವನ್ನು ಎಲ್ಲರೂ ನೋಡಬೇಕು. ಅದರಲ್ಲೂ ವಿದ್ಯಾರ್ಥಿನಿಯರು, ಯುವತಿಯರು ನೋಡಬೇಕು. ಹೆಣ್ಣು ಮಕ್ಕಳ ಪೋಷಕರು ನೋಡಬೇಕು ಅನ್ನೋದು ಬಿಜೆಪಿ ಮನವಿ. ಯುವತಿಯರು ಆಕರ್ಷಣೆಗೆ ಹಾಗೂ ಆಮಿಷಕ್ಕೆ ಒಳಗಾಗಿ ಮತಾಂತರ ಆಗಬಾರದು. ಹೆಣ್ಣೆತ್ತವರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು, ಅವರನ್ನ ರಕ್ಷಣೆ ಮಾಡಬೇಕು ಅನ್ನೋದು ಬಿಜೆಪಿ ಅಭಿಮತ. ಬಿಜೆಪಿ ನಾಯಕರು ಉಚಿತವಾಗಿ ಯುವತಿಯರಿಗೆ ಟಿಕೆಟ್ ವಿತರಿಸಿ ಕೇರಳ ಸ್ಟೋರಿ ಸಿನಿಮಾ ನೋಡಲು ಪ್ರೋತ್ಸಾಹ ಮಾಡ್ತಿದ್ಧಾರೆ. ಹಲವಾರು ಬಿಜೆಪಿ ನಾಯಕರು ಖುದ್ದಾಗಿ ಕೇರಳ ಸ್ಟೋರಿ ಸಿನಿಮಾ ನೋಡಿ ಪ್ರಚಾರ ನೀಡುತ್ತಿದ್ದಾರೆ. ಖುದ್ದು ಪ್ರಧಾನಿ ಮೋದಿ ಅವರೇ ಕೇರಳ ಸ್ಟೋರಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಲವ್ ಜಿಹಾದ್‌ಗೆ ಅಂತ್ಯ ಹಾಡಬೇಕು ಅನ್ನೋದು ಬಿಜೆಪಿ ನಿಲುವು. ಜೊತೆಯಲ್ಲೇ ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶ ರಾಜ್ಯಗಳು ಕೇರಳ ಸ್ಟೋರಿ ಸಿನಿಮಾವನ್ನು ತೆರಿಗೆ ಮುಕ್ತ ಮಾಡಿದ್ದಾರೆ. ಕರ್ನಾಟಕದಲ್ಲೂ ಈ ಸಿನಿಮಾವನ್ನು ತೆರಿಗೆ ಮುಕ್ತ ಮಾಡಬೇಕು ಅನ್ನೋ ಆಗ್ರಹಗಳು ಕೇಳಿ ಬರ್ತಿವೆ. ವಿರೋಧ ಪಕ್ಷಗಳ ಆಡಳಿತ ಇರುವ ಕೆಲವು ರಾಜ್ಯಗಳು ನಿಷೇಧ ಹೇರುತ್ತಿರುವ ಹೊತ್ತಲ್ಲೇ ಬಿಜೆಪಿ ಆಡಳಿತದ ರಾಜ್ಯಗಳು ಟ್ಯಾಕ್ಸ್ ಫ್ರೀ ಮಾಡುತ್ತಿವೆ.
ಪ್ರೀತಿ, ಪ್ರೇಮದ ನಂಟಿಗೆ ಜಾತಿ, ಧರ್ಮದ ಹಂಗಿಲ್ಲ, ಬಡವ – ಶ್ರೀಮಂತ ಎಂಬ ಬೇಧವಿಲ್ಲ. ಆದ್ರೆ, ಹಿಂದೂ – ಮುಸ್ಲಿಂ ಯುವಕ ಯುವತಿ ನಡುವಣ ಪ್ರೇಮ ಬಾಂಧವ್ಯಕ್ಕೆ ಮಾತ್ರ ‘ಲವ್ ಜಿಹಾದ್’ ಅನ್ನೋ ಹಣೆಪಟ್ಟಿ ಏಕೆ ಅನ್ನೋದು ಕೆಲವರ ಪ್ರಶ್ನೆ. ಇದಕ್ಕೆ ವ್ಯತಿರಿಕ್ತ ವಾದ ದಿ ಕೇರಳ ಸ್ಟೋರಿ ಸಿನಿಮಾದಲ್ಲಿದೆ. ಪ್ರೀತಿ ಪ್ರೇಮದ ಹೆಸರಲ್ಲಿ ಯುವತಿಯರನ್ನು ಸೆಳೆದು ಅವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಮತಾಂಧರ ಕೈಗೆ ಸಿಕ್ಕು ಯುವತಿಯರು ನರಳುತ್ತಿದ್ಧಾರೆ ಅನ್ನೋದು ಸಿನಿಮಾದ ಸಾರಾಂಶ. ಯಾವುದೇ ಧರ್ಮದ ಒಬ್ಬಳೇ ಒಬ್ಬ ಯುವತಿಯೂ ಈ ರೀತಿಯ ದೌರ್ಜನ್ಯ ಅನುಭವಿಸಲೇ ಬಾರದು ಅನ್ನೋದು ಲವ್ ಜಿಹಾದ್ ವಿರೋಧಿಗಳ ನಿಲುವು. ಇಲ್ಲಿ ಯಾರು ಸರಿ? ಯಾರು ತಪ್ಪು? ಅನ್ಯ ಧರ್ಮೀಯ ವಿವಾಹವಾದ ಜೋಡಿಗಳು ದೇಶದಲ್ಲಿ ಎಷ್ಟಿವೆ? ಅನ್ಯ ಧರ್ಮೀಯ ವಿವಾಹ ತಪ್ಪೋ, ಸರಿಯೋ? ಹೀಗೆ ಎಷ್ಟೊಂದು ಪ್ರಶ್ನೆಗಳು, ಲೆಕ್ಕವಿಲ್ಲದಷ್ಟು ವಾದ – ವಿವಾದಗಳು ದೇಶದಲ್ಲಿ ಮೊದಲಿನಿಂದ ನಡೆಯುತ್ತಲೇ ಇವೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಂದಾಗಲೂ ಇಂಥದ್ದೇ ಹಲವು ಚರ್ಚೆಗಳು ನಡೆದಿದ್ದವು. ಇದೀಗ ಕೇರಳ ಸ್ಟೋರಿ ಸಿನಿಮಾ ಲವ್ ಜಿಹಾದ್‌ನ ಚರ್ಚೆ ಹುಟ್ಟುಹಾಕಿದೆ.