ಮನೆ ಸುದ್ದಿ ಜಾಲ ರೈಲ್ವೆ ಕ್ರೀಡಾ ಮೈದಾನದಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ

ರೈಲ್ವೆ ಕ್ರೀಡಾ ಮೈದಾನದಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ

0

ಮೈಸೂರು: 73 ನೆಯ ಗಣರಾಜ್ಯೋತ್ಸವವನ್ನು ಮೈಸೂರಿನ ರೈಲ್ವೆ ಕ್ರೀಡಾ ಮೈದಾನದಲ್ಲಿ ರೈಲ್ವೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಅವರ ಕುಟುಂಬದವರೊಂದಿಗೆ ಆಚರಿಸಲಾಯಿತು.

ಈ ಸಂದರ್ಭ ಮಾತನಾಡಿದ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್,  ರೈಲ್ವೆ ಕುಟುಂಬದ ಎಲ್ಲಾ ಸದಸ್ಯರಿಗೆ, ಉದ್ಯಮ ಹಾಗು ವ್ಯಾಪಾರದ ಪಾಲುದಾರರಿಗೆ ಮತ್ತು ರೈಲು ಪ್ರಯಾಣಿಕರು, ಗ್ರಾಹಕರಿಗೆ ಹೃತ್ಪೂರ್ವಕ ಶುಭಾಷಯಗಳನ್ನು ತಿಳಿಸಿದರು.

ಮೈಸೂರಿನ ರೈಲ್ವೆ ಆಸ್ಪತ್ರೆಯ ಎಲ್ಲಾ 101 ಹಾಸಿಗೆಗಳು ಈಗ ಕೇಂದ್ರೀಕೃತ ನಳಿಕೆಗಳ ಮುಖಾಂತರ ಆಮ್ಲಜನಕವನ್ನು ಪಡೆಯುವ ವ್ಯವಸ್ಥೆ ಹೊಂದಿವೆ ಎಂದು ಹೇಳಿದರು.

ಅಕ್ಟೋಬರ್ 2021 ರಲ್ಲಿ ರೋಗಿಗಳಿಗೆ ಅಡೆತಡೆಯಿಲ್ಲದೆ ಆಮ್ಲಜನಕದ ಪೂರೈಕೆಯನ್ನು ಖಾತ್ರಿಪಡಿಸುವ ದೃಷ್ಟಿಯಿಂದ, ಅಂದಾಜು 80 ಲಕ್ಷ ರೂ ವೆಚ್ಚದಲ್ಲಿ, ಪ್ರತಿ ನಿಮಿಷಕ್ಕೆ 500 ಲೀಟರ್ ಪೂರೈಸುವ ಹೊಸ PSA 500 ಆಮ್ಲಜನಕ ಉತ್ಪಾದಕ ಘಟಕವನ್ನು ಕಾರ್ಯಾರಂಭಗೊಳಿಸಲಾಯಿತು. 98% ಕ್ಕಿಂತ ಹೆಚ್ಚು ಸಿಬ್ಬಂದಿಗೆ ಎರಡೂ ಡೋಸ್‌ಗಳ ಲಸಿಕೆ ನೀಡಲಾಗಿದೆ ಮತ್ತು 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಗು ಅರ್ಹ ನಾಗರಿಕರಿಗೆ ಬೂಸ್ಟರ್ ಡೋಸ್‌ಗಳನ್ನು ಮೈಸೂರಿನ ರೈಲ್ವೆ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಸಾಂಕ್ರಾಮಿಕ ರೋಗದಿಂದ ಉಂಟಾಗುವ ಅಡೆತಡೆಗಳ ನಡುವೆಯೂ ಪ್ರಾಮಾಣಿಕ ಮತ್ತು ಸಮರ್ಪಿತ ರೈಲ್ವೆ ಪುರುಷ ಮತ್ತು ಮಹಿಳಾ ಸಿಬ್ಬಂದಿಗಳ ಪ್ರಯತ್ನದಿಂದ, ಪ್ರಸಕ್ತ ವರ್ಷದಲ್ಲಿ ಮೈಸೂರು ವಿಭಾಗದ ಮೂರನೇ ತ್ರೈಮಾಸಿಕದ ಅಂತ್ಯದವರೆಗೆ ಆರ್ಥಿಕ ಸಾಧನೆ ಸಾಕಷ್ಟು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಕೋವಿಡ್ ಪೂರ್ವ ರೈಲುಗಳ ಓಡಾಟದ ಸ್ಥಿತಿಗೆ ಹೋಲಿಸಿದರೆ ಪ್ರಯಾಣಿಕರ ರೈಲುಗಳಲ್ಲಿ 90% ರೈಲು ಸೇವೆಗಳನ್ನು ವಿಭಾಗದಾದ್ಯಂತ ಪುನಃ ಪ್ರಾರಂಭಿಸಲಾಗಿದೆ. ಮೈಸೂರು ವಿಭಾಗವು ಡಿಸೆಂಬರ್ 2021 ರವರೆಗೆ 10.69 ದಶಲಕ್ಷ ಪ್ರಯಾಣಿಕರನ್ನು ಸಾಗಿಸಿದೆ. ಪ್ರಯಾಣಿಕರ ರೈಲುಗಳ ಸಮಯಪಾಲನೆಯ ಕಾರ್ಯಕ್ಷಮತೆಯೂ ಉತ್ತಮವಾಗಿದ್ದು,  ಮೇಲ್ / ಎಕ್ಸ್‌ಪ್ರೆಸ್ ರೈಲುಗಳು 99% ಕ್ಕಿಂತ ಹೆಚ್ಚು ಸಮಯಪಾಲನೆಯೊಂದಿಗೆ ಚಲಿಸುವ ಮೂಲಕ ಗಮನಾರ್ಹ ಸುಧಾರಣೆಯನ್ನು ಕಂಡಿದೆ ಎಂದು ಅವರು ಹೇಳಿದರು.

ಉತ್ತಮ ವ್ಯಾಗನ್ ಟರ್ನ್‌ಅರೌಂಡ್‌ಗಾಗಿ ಸರಕು ರೈಲುಗಳ ಚಲನಶೀಲತೆಯನ್ನು ಸುಧಾರಿಸುವ ಗುರಿಯೊಂದಿಗೆ ‘ಕನ್ಸರ್ಟೆಡ್ ಡ್ರೈವ್‌’ಗಳನ್ನು ಪ್ರಾರಂಭಿಸಲಾಯಿತು. ಇದು ಕಳೆದ ಕೆಲವು ತಿಂಗಳುಗಳಲ್ಲಿ ಸರಕು ಸಾಗಾಣೆ ರೈಲುಗಳ ಸರಾಸರಿ ವೇಗ ಗಂಟೆಗೆ 49.1 ಕಿ.ಮೀ. ತಲುಪಲು ಸಹಾಯ ಮಾಡಿದೆ.

ಕಾರ್ಯಾಚರಣೆಯ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ ಮತ್ತು ಅಪಘಾತಗಳಿಗೆ ಶೂನ್ಯ ಸಹಿಷ್ಣುತೆಯೊಂದಿಗೆ ಎಲ್ಲಾ ಹಂತಗಳಲ್ಲಿ ಎಲ್ಲಾ ಸುರಕ್ಷತಾ ನಡವಳಿಕೆ / ನಿಯಮಗಳನ್ನು ಪಾಲಿಸಲು ವಿಭಾಗವು ಕಟಿಬದ್ಧವಾಗಿದೆ ಎಂದು ಶ್ರೀ ಅಗರ್ವಾಲ್ ರವರು ಹೇಳಿದರು. ವಿಭಾಗದ ಅಧಿಕಾರ ವ್ಯಾಪ್ತಿಯಲ್ಲಿರುವ ನಾಲ್ಕು ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕಲಾಗಿದ್ದೂ, ಅವುಗಳ ಬದಲಿಗೆ ರೈಲ್ವೆ ಮೇಲ್ಸೇತುವೆ/ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ ಮತ್ತು ಈ ವರ್ಷ ವಿಭಾಗಕ್ಕೆ ನಿಗದಿಪಡಿಸಿರುವ ಗುರಿಯನ್ನು ಸಾಧಿಸುವ ಕೆಲಸ ಪ್ರಗತಿಯಲ್ಲಿದೆ. ಮೂರು ಶಾಶ್ವತ ವೇಗ ನಿರ್ಬಂಧಗಳನ್ನು (PSR) ಸಹ ತೆಗೆದುಹಾಕಲಾಗಿದೆ. ಗುರಿಗೆ ಅನುಗುಣವಾಗಿ ಸುರಕ್ಷತೆಯನ್ನು ಸುಧಾರಿಸಲು ವಿವಿಧ ರೀತಿಯ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ವಿಭಾಗದಾದ್ಯಂತ ಮತ್ತು ರೈಲುಗಳಲ್ಲಿ, ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಸುರಕ್ಷತಾ ಜಾಥಾಗಳು ಮತ್ತು ಜಾಗೃತಿ ಶಿಬಿರಗಳನ್ನು ಸಹ ಆಯೋಜಿಸಲಾಗಿದೆ ಎಂದು ಹೇಳಿದರು.

 ಕೆಲವು ಭಾಗದಲ್ಲಿ ರೈಲಿನ ವೇಗವನ್ನು ಹೆಚ್ಚಿಸಲು ನಡೆಯುತ್ತಿರುವ ಪ್ರಯತ್ನಗಳಲ್ಲಿ, 101 ಕಿಮೀಗಳಷ್ಟು ಮಾರ್ಗದಲ್ಲಿ ಗರಿಷ್ಠ ವೇಗವನ್ನು ಗಂಟೆಗೆ 110 ಕಿಮೀ ಮತ್ತು 41 ಕಿಮೀಗಳಷ್ಟು ಮಾರ್ಗದಲ್ಲಿ ಗಂಟೆಗೆ 100 ಕಿಮೀಗೆ ವೇಗವನ್ನು ಏರಿಸಲಾಗಿದೆ. ಅದೇ ರೀತಿ 5 ನಿಲ್ದಾಣಗಳಲ್ಲಿನ 10 ಲೂಪ್ ಲೈನ್‌ಗಳ ವೇಗವನ್ನು ಗಂಟೆಗೆ 15 ಕಿಮೀನಿಂದ 30 ಕಿಮೀಗೆ ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಏಪ್ರಿಲ್ 2021 ರಿಂದ ಚಿತ್ರದುರ್ಗ-ಚಿಕ್ಕಜಾಜೂರು ಭಾಗದ ನಡುವೆ 46.72 ಕಿಲೋಮೀಟರ್ ಗಳ ಹೆಚ್ಚುವರಿ ವಿದ್ಯುದ್ದೀಕರಣವನ್ನು ಮಾಡಲಾಗಿದ್ದು, ವಿಭಾಗದಲ್ಲಿ ಒಟ್ಟು 251 ಕಿಮೀ ವಿದ್ಯುದ್ದೀಕರಣವಾಗಿದೆ. ಇತರ ವಿದ್ಯುದ್ದೀಕರಣ ಯೋಜನೆಗಳು ಸಹ ಪ್ರಗತಿಯಲ್ಲಿವೆ ಮತ್ತು ಎಲ್ಲಾ ಬಿ.ಜಿ. ಮಾರ್ಗಗಳನ್ನು ಡಿಸೆಂಬರ್ 2023 ರೊಳಗೆ ಸಂಪೂರ್ಣವಾಗಿ ವಿದ್ಯುದ್ದೀಕರಿಸುವ ರಾಷ್ಟ್ರೀಯ ಯೋಜನೆಯ ಪ್ರಕಾರವಾಗಿಯೇ ಅವುಗಳನ್ನು ಕಾರ್ಯಗತಗೊಳಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಅವರು ಮಾನವ ಸಂಪನ್ಮೂಲ ಭಾಗದಲ್ಲಿ ಕೈಗೊಂಡ ವಿವಿಧ ಸುಧಾರಣಾ ಕ್ರಮಗಳನ್ನು ಪಟ್ಟಿ ಮಾಡಿದರು ಹಾಗು ಡಿಸೆಂಬರ್ 2021 ರವರೆಗೆ 958 ಉದ್ಯೋಗಿಗಳಿಗೆ ಬಡ್ತಿ ನೀಡಲಾಗಿದೆ ಮತ್ತು 48 ಉದ್ಯೋಗಿಗಳಿಗೆ ಆರ್ಥಿಕ ಉನ್ನತೀಕರಣವನ್ನು ನೀಡಲಾಗಿದೆ ಎಂದು ಹೇಳಿದರು.

ಹಿಂದಿನ ಲೇಖನಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಒತ್ತು: ಸಚಿವ ಕೆ.ಗೋಪಾಲಯ್ಯ
ಮುಂದಿನ ಲೇಖನಪ್ರತಿಯೊಬ್ಬರಿಗೂ ಕೋವಿಡ್ ಚಿಕಿತ್ಸಾ ಕಿಟ್ ವಿತರಣೆಗೆ ಸಚಿವ ಎಸ್.ಟಿ.ಸೋಮಶೇಖರ್  ಸೂಚನೆ