ನವದೆಹಲಿ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಮರುಸ್ಥಾಪನೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ.
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕುರಿತು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಕಳೆದ ವರ್ಷ ರಾಜ್ಯದಲ್ಲಿ ರಾಜ್ಯಪಾಲರು ಬದಲಾವಣೆಗೆ ಕಾರಣವಾದ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕುರಿತು ಉದ್ಧವ್ ಠಾಕ್ರೆ ಮತ್ತು ಮುಖ್ಯಮಂತ್ರಿ ಎಂ ಏಕನಾಥ್ ಶಿಂಧೆ ಬಣಗಳು ಸಲ್ಲಿಸಿದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಗುರುವಾರ (ಮೇ 11) ತನ್ನ ತೀರ್ಪನ್ನು ಪ್ರಕಟಿಸಿದೆ.
ಕಳೆದ ವರ್ಷ ಏಕನಾಥ ಶಿಂದೆ ನೇತೃತ್ವದಲ್ಲಿ ಶಿವಸೇನೆಯ ಶಾಸಕರು ಬಂಡಾಯ ಎದ್ದು, ಬಿಜೆಪಿಗೆ ಬೆಂಬಲ ಘೋಷಿಸಿದ್ದರು. ಈ ಪ್ರಕರಣ ಸಂಬಂಧ ಏಕನಾಥ ಶಿಂಧೆ ಹಾಗೂ 15 ಶಾಸಕರನ್ನು ಅನರ್ಹಗೊಳಿಸಬೇಕು ಎಂದು, ಮಹಾವಿಕಾಸ ಅಘಾಡಿ ಸರ್ಕಾರವನ್ನು ಮರುಸ್ಥಾಪನೆ ಮಾಡಬೇಕು ಎಂದು ಕೋರಿ ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು
ಗುರುವಾರ ಪ್ರಕರಣ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್, ಉದ್ಧವ್ ಠಾಕ್ರೆ ವಿಶ್ವಾಸಮತ ಸಾಬೀತು ಪಡಿಸದೆ ರಾಜೀನಾಮೆ ನೀಡಿದ್ದರಿಂದ ಸರ್ಕಾರವನ್ನು ಮರುಸ್ಥಾಪಿಸಲಾಗದು ಎಂದು ಹೇಳಿದೆ.
ಅಲ್ಲದೇ ಉದ್ಧವ್ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ನಿರ್ಧಾರಕ್ಕೆ ಬಂದಿದ್ದು ಹಾಗೂ ಬಹುಮತ ಸಾಬೀತಿಗೆ ಸೂಚಿಸಿದ ನಿರ್ಧಾರ ತಪ್ಪು ಎಂದು ಸುಪ್ರೀಂ ಕೋರ್ಟ್ ಹೇಳಿದೆ.