ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನಾಯಕ ಶ್ರೀನಿವಾಸನ್ ಅವರನ್ನು 2022ರಲ್ಲಿ ಹತ್ಯೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) 17 ಸದಸ್ಯರಿಗೆ ಕೇರಳ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದ್ದು ಇದೇ ವೇಳೆ 9 ಮಂದಿಗೆ ಜಾಮೀನು ತಿರಸ್ಕರಿಸಿದೆ [ಅಶ್ರಫ್ ಅಲಿಯಾಸ್ ಅಶ್ರಫ್ ಮೌಲವಿ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣ ].
ನ್ಯಾಯಾಲಯಗಳು ಸೈದ್ಧಾಂತಿಕ ಪಕ್ಷಪಾತ ಇಲ್ಲವೇ ಸುಳ್ಳು ನಿರೂಪಗಳಿಗೆ ಈಡಾಗದಂತೆ ತಮ್ಮನ್ನು ನೋಡಿಕೊಳ್ಳಬೇಕಿದೆ ಎಂದು ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ಶ್ಯಾಮ್ ಕುಮಾರ್ ವಿಎಂ ಅವರಿದ್ದ ವಿಭಾಗೀಯ ಪೀಠ ಹೇಳಿತು.
ಆರೋಪಿಯ ಮೂಲಭೂತ ಹಕ್ಕುಗಳ ಪರವಾಗಿ ಒಲವು ತೋರುವುದು ಸಾಂವಿಧಾನಿಕ ನ್ಯಾಯಾಲಯಗಳ ಪಾತ್ರವಾಗಿರಬೇಕೆ ವಿನಾ ಅಂತಹ ಹಕ್ಕುಗಳನ್ನು ನಿರ್ಬಂಧಿಸುವುದರ ಪರವಾಗಿ ಅಲ್ಲ ಎಂದು ಅದು ಒತ್ತಿ ಹೇಳಿತು.
ಅಲ್ಲದೆ ಆರೋಪಿಗಳ ವಿರುದ್ಧ ಭಯೋತ್ಪಾದನೆಯಂತಹ ಆರೋಪ ಇರುವ ಸಾಕ್ಷ್ಯಗಳನ್ನು ಪರಿಶೀಲಿಸುವಾಗ ನ್ಯಾಯಾಲಯ ಸಮಾಜದ ಪ್ರಚಲಿತ ಸೈದ್ಧಾಂತಿಕ ಪಕ್ಷಪಾತ ಮತ್ತು ಸುಳ್ಳು ನಿರೂಪಗಳ ವಿರುದ್ಧ ಕಾವಲಿರಬೇಕು ಎಂದು ಅದು ತಿಳಿಸಿದೆ.
ಪಾಲಕ್ಕಾಡ್ ಜಿಲ್ಲೆಯಲ್ಲಿ 2022ರಲ್ಲಿ ನಡೆದ ಶ್ರೀನಿವಾಸನ್ ಹತ್ಯೆಯ ಆರೋಪಿಗಳು ಹಾಗೂ ಪಿಎಫ್‌ಐ ಸದಸ್ಯರಾದ 26 ವ್ಯಕ್ತಿಗಳು ಸಲ್ಲಿಸಿದ್ದ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.
ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಪರಿಶೀಲಿಸಿದ ನ್ಯಾಯಾಲಯ ಯುಎಪಿಎ ಸೆಕ್ಷನ್ 43ಡಿ (5) ಅಡಿಯಲ್ಲಿ ಜಾಮೀನು ನಿರಾಕರಣೆ ಪ್ರಕರಣದ 9 ಮೇಲ್ಮನವಿದಾರರಿಗೆ ಮಾತ್ರ ಅನ್ವಯಿಸುತ್ತದೆ ಎಂದು ತೀರ್ಮಾನಿಸಿತು. ಈ ಹಿನ್ನೆಲೆಯಲ್ಲಿ, ಪಿಎಫ್‌ಐನ ಕೇರಳ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಬ್ದುಲ್ ಸತಾರ್ ಸೇರಿದಂತೆ 9 ಮೇಲ್ಮನವಿದಾರರ ಮನವಿಯನ್ನು ಅದು ವಜಾಗೊಳಿಸಿತು.
ಆದರೆ ಉಳಿದ 17 ಮೇಲ್ಮನವಿದಾರರ ವಿರುದ್ಧದ ಆರೋಪಗಳು ನಿಜವೆಂದು ಮೇಲ್ನೋಟಕ್ಕೆ ಸಾಬೀತಾಗಿಲ್ಲ ಎಂದ ಪೀಠ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತು.