ಮಾಂಡವ್ಯ ಋಷಿ ಒಬ್ಬ ಸಿದ್ಧಪುರುಷರಾಗಿದ್ದರು. ಧ್ಯಾನಯೋಗಾದಿಗಳನ್ನು ನಡೆಸುತ್ತಾ ಅಪಾರ ವರ್ಚಸ್ಸನ್ನು ಗಳಿಸಿದ್ದರು. ದಿನದ ಬಹುಪಾಲು ಸಮಯವನ್ನು ತಮ್ಮ ಆಶ್ರಮದಲ್ಲಿ ತಪಶ್ಚರಣೆಯಲ್ಲಿ ಕಳೆಯುತ್ತಿದ್ದರು.
ಒಮ್ಮೆ ಹೀಗಾಯ್ತು. ಅರಮನೆಗೆ ಕನ್ನ ಹಾಕಿದ ಕಳ್ಳರ ಗುಂಪೊಂದು ಭಟರಿಂದ ತಪ್ಪಿಸಿಕೊಂಡು ಓಡುತ್ತಾ ಮಾಂಡವ್ಯರ ಆಶ್ರಮ ಹೊಕ್ಕಿತು. ಇದೇ ಪ್ರಸ್ತ ಜಾಗವೆಂದು, ದೋಚಿದ ಸಂಪತ್ತೆಲ್ಲ ಅಲ್ಲೇ ಅಡಗಿಸಿ, ತಾವೂ ಅಡಗಿ ಕುಳಿತರು. ಕಳ್ಳರನ್ನು ಬೆನ್ನಟ್ಟಿದ ಭಟರೂ ಆಶ್ರಮವನ್ನು ತಲುಪಿದರು. “ಇಲ್ಲಿ ಕಳ್ಳರು ಬಂದುದನ್ನು ಕಂಡಿರಾ?” ಎಂದು ಮಾಂಡವ್ಯರನ್ನು ಕೇಳಿದರು. ಧ್ಯಾನನಿರತರಾಗಿದ್ದ ಮಾಂಡವ್ಯರಿಗೆ ಯಾವ ಪರಿವೆಯೂ ಇರಲಿಲ್ಲ. ಭಟರು ನಾಲ್ಕೈದು ಬಾರಿ ಪ್ರಶ್ನಿಸಿದರೂ ಅವರಿಂದ ಪ್ರತಿಕ್ರಿಯೆ ದೊರೆಯಲಿಲ್ಲ.
ಅಸಹನೆಯಿಂದ ಭಟರು ಆಶ್ರಮದ ಒಳಹೊಕ್ಕು ಜಾಲಾಡಿದರು. ಸಂಪತ್ತಿನ ಸಮೇತ ಕಳ್ಳರನ್ನು ಹಿಡಿದರು. ಈ ಋಷಿಯೂ ಕಳ್ಳರ ಗುಂಪಿನವನೇ ಅಂದುಕೊಂಡು ಮಾಂಡವ್ಯರನ್ನೂ ಎಳೆದೊಯ್ದರು. ರಾಜ ಮಾಲಿನ ಸಮೇತ ಕಳ್ಳರು ಸಿಕ್ಕಿದ್ದರಿಂದ ಎಲ್ಲರನ್ನೂ ಶೂಲಕ್ಕೇರಿಸಲು ಆದೇಶಿಸಿದ. ಕಳ್ಳರು ಶೂಲಕ್ಕೇರಿಸುತ್ತಲೇ ಸತ್ತುಹೋದರು. ಆದರೆ ಯೋಗಿಯಾಗಿದ್ದ ಮಾಂಡವ್ಯರು ಜೀವಿತರಾಗಿ ಇದ್ದುದಲ್ಲದೆ, ಶೂಲದ ಮೇಲೂ ಸ್ವಸ್ಥರಾಗೇ ಇದ್ದರು.
ಇದರಿಂದ ಸೋಜಿಗಪಟ್ಟ ರಾಜನು ಅವರ ಇತಿವೃತ್ತ ವಿಚಾರಿಸಲಾಗಿ, ಅವರೊಬ್ಬ ಋಷಿ ಎಂದು ತಿಳಿಯಿತು. ಪಶ್ಚಾತ್ತಾಪ ಪಟ್ಟ ರಾಜನು ಕ್ಷಮೆ ಯಾಚಿಸಿ, ಗೌರವಪೂರ್ವಕವಾಗಿ ನಡೆಸಿಕೊಂಡು, ಅವರ ಬೆನ್ನಿಗೆ ಚುಚ್ಚಲಾಗಿದ್ದ ಶೂಲವನ್ನು ತೆಗೆಯುವಂತೆ ಆಜ್ಞಾಪಿಸಿದನು. ಏನು ಮಾಡಿದರೂ ಶೂಲವನ್ನು ತೆಗೆಯಲಾಗಲಿಲ್ಲ. ಕೊನೆಗೆ ಸ್ವಲ್ಪ ಭಾಗವನ್ನು ಬೆನ್ನಿನಲ್ಲೇ ಉಳಿಸಿ, ಮಿಕ್ಕಿದ್ದನ್ನು ಕೊಯ್ದು ತೆಗೆಯಲಾಯಿತು.
ಅಂದಿನಿಂದ ಮಾಂಡವ್ಯರು ಬೆನ್ನಿನಲ್ಲಿ ಶೂಲವನ್ನು ಹೊತ್ತುಕೊಂಡೇ ಓಡಾಡಬೇಕಾಯ್ತು. ಇದರಿಂದಾಗಿಯೇ ಅವರಿಗೆ ‘ಅಣಿ ಮಾಂಡವ್ಯ’ ಎಂಬ ಹೆಸರು ಬಂತು.
ಇದರಿಂದ ಬೇಸರಗೊಂಡ ಅಣಿಮಾಂಡವ್ಯರು ಯಮನಲ್ಲಿಗೆ ತೆರಳಿ, “ನನಗೇಕೆ ಈ ಶಿಕ್ಷೆ?” ಎಂದು ವಿಚಾರಿಸಿದರು.
ಆಗ ಚಿತ್ರಗುಪ್ತನು ದಫ್ತರ ತೆಗೆದು “ಕಳೆದ ಜನ್ಮದಲ್ಲಿ ಬಾಲಕನಾಗಿದ್ದಾಗ ಪತಂಗಗಳ ಬೆನ್ನಿಗೆ ನೀವು ಮುಳ್ಳು ಚುಚ್ಚಿದ್ದಿರಿ. ಅದಕ್ಕಾಗಿ ಯಮಧರ್ಮ ನಿಮೆಗ ಈ ಶಿಕ್ಷೆ ನೀಡಿದ್ದಾನೆ” ಎಂದ. “ಹನ್ನೆರಡು ವರ್ಷಗಳ ಒಳಗಿನ ಮಕ್ಕಳ ತಪ್ಪುಗಳು ಅಪರಾಧವಲ್ಲ. ಅಷ್ಟೂ ತಿಳಿಯದೆ ನನಗೆ ಶಿಕ್ಷೆ ವಿಧಿಸಿರುವ ನೀನು ಭೂಮಿಯಲ್ಲಿ ಹುಟ್ಟು” ಎಂದು ಅಣಿಮಾಂಡವ್ಯರು ಯಮನಿಗೆ ಶಾಪ ಕೊಟ್ಟರು.
ಶಾಪ ಪಡೆದ ಯಮಧರ್ಮನು ದ್ವಾಪರ ಯುಗದಲ್ಲಿ ಕುರುಕುಲದ ಅರಸನ ದಾಸಿಯ ಮಗನಾಗಿ ‘ವಿದುರ’ನೆಂಬ ಹೆಸರಿನಿಂದ ಜನಿಸಿದನು.